ಸವಿತಾ ಮಹರ್ಷಿಯ ವೃತ್ತಾಂತ ವೆಂಕಟಾಚಲಪತಿ.ಪಿ.ಬಿ ದಾವಣಗೆರೆ

 ಅದ್ಯಾಯ 25.

ಸವಿತಾ  ಮಹರ್ಷಿಯ ಜನ್ಮ ವೃತ್ತಾಂತ

ಸವಿತಾ ಮಹರ್ಷಿ

ಸೃಷ್ಟಿಯ ದೇವರಾದ ಬ್ರಹ್ಮದೇವರು ಬ್ರಹ್ಮಾಂಡದ ಸೃಷ್ಟಿಗೆ   ಕೆಲವು ದೇವತೆಗಳ ಸೇವೆ ಅಗತ್ಯವಿತ್ತು. ಆದ್ದರಿಂದ  ಬ್ರಹ್ಮ ದೇವರು ಹತ್ತು  ಜನ ಪ್ರಜಾಪತಿಗಳನ್ನು  ಸೃಷ್ಟಿ ಮಾಡಿದರೆಂದು  ಆ ಹತ್ತು ಪ್ರಜಾಪತಿಗಳ  ಹೆಸರುಗಳು ಈ ಕೆಳಗಿನಂತಿವೆ:  1. ಮಾರೀಚಿ  2. ಅತ್ರಿ  3. ಆಂಗೀರಸ   4. ಪುಲಹ 5. ಪುಲಸ್ತ್ಯ  6. ಕ್ರಾತ್ರು  7. ವಶಿಷ್ಠ   8.  ಪ್ರಾಚೇತಾಸ್ಕ  9. ಬೃಗು 10. ನಾರದ 

    ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬರಾದ ಮಾರಿಚಿ ಋಷಿಯು ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು ಇವರಿಗೆ ಜನಿಸಿದ ಮಗನೇ ಕಶ್ಯಪ ಮುನಿ  ಇವರು  ಬ್ರಹ್ಮ ನ ಸೃಷ್ಟಿಕಾರ್ಯದಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.  ಇವರಿಗೆ  ಅದಿತಿ,  ದಿತಿ,  ದನು, ಕಲಾ, ದಾನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ,  ವಿಶ್ವಾ,  ವಿನುತಾ, ಕಪಿಲ,  ಮುನಿ,  ಕದ್ರು, ಎಂಬ  ಹದಿಮೂರು ಜನ  ಹೆಂಡತಿಯರು.  ಮಾರಿಚಿಯು ಕರ್ದಮ  ಮುನಿಯ  ಮಗಳಾದ ಕಲಾಳನ್ನು  ಮದುವೆಯಾಗಿ ಕಶ್ಯಪನಿಗೆ ಜನ್ಮ ನೀಡಿದಳು (ಕಶ್ಯಪರನ್ನು ಕೆಲವೊಮ್ಮೆ ಪ್ರಜಾಪತಿ  ಎಂದು  ಕರೆಯಲಾಗುತ್ತದೆ),  ಮರೀಚಿಯ ಹಾಗೂ  ಕಲಾರ  ಮಗನಾದ  ಕಶ್ಯಪನು  ದಕ್ಷನ 13 ಜನ  ಪುತ್ರಿಯರಾದ  ದಿತಿ, ಅದಿತಿ, ದನು, ಕಲಾ,  ದನಾಯು,  ಸಿಂಹಿಕಾ, ಕ್ರೋಧಾ,  ಪ್ರಾಧಾ,  ವಿಶ್ವಾ  ವಿನತಾ, ಕಪಿಲಾ,   ಮುನಿ,  ಕದ್ರುರನ್ನು ಮದುವೆಯಾಗಿ  ತನ್ನ ಪೂರ್ವಜರಾದ  ಬ್ರಹ್ಮ  ಹಾಗೂ ಮರೀಚಿಯರ  ಸೃಷ್ಟಿಯ ಕಾರ್ಯದಲ್ಲಿ  ನೆರವಾದರು  ಎಂದು ಹೇಳಲಾಗಿದೆ. 


              ಬ್ರಹ್ಮ ಹಾಗೂ ಪ್ರಜಾಪತಿಗಳು

 ಕಶ್ಯಪರ   ಮೊದಲನೇ ಪತ್ನಿ  ಅದಿತಿಗೆ  12 ಜನ - ಮಕ್ಕಳು ಜನಿಸುತ್ತಾರೆ  ಇವರನ್ನು  ದ್ವಾದಶ ಆದಿತ್ಯರು ಎಂದು ಕರೆಯುತ್ತಾರೆ 

1. ಧಾತಾ   2  ಮಿತ್ರ  3. ಅರ್ಯಮಾ. 4  ಇಂದ್ರ   5. ವರುಣ  6 . ಅಂಶ   7. ಭಗ   8.  ವಿವಸ್ವಾ  9.  ಪೂಷಾ  10 .ಸವಿತಾ  11. ತ್ವಷ್ಟಾ  12.  ವಿಷ್ಣು.  ಕಶ್ಯಪರು  ತನ್ನ  ತಂದೆಯಿಂದ  ಸೃಷ್ಟಿಯ  ಹಕ್ಕನ್ನು ಆನುವಂಶಿಕವಾಗಿ   ಪಡೆದಿದ್ದರೆಂದು  ಇವರು  ವಿಷ್ಣುವಿನ   ನಿರಂತರವಾದ ಶಕ್ತಿಯಿಂದ  ರೂಪಗೊಂಡರೆಂದು  ನಂಬಲಾಗಿದೆ. ಆಧುನಿಕ ರಾಜಸ್ಥಾನದಲ್ಲಿ  ಕಂಡು ಬರುವ  ಪುಷ್ಕರ್‌ನಲ್ಲಿ  ಇವರು ಬ್ರಹ್ಮನ  ತಪಸ್ಸನ್ನು ಮಾಡಿದ್ದರೆಂದು ನಂಬಲಾಗಿದೆ. ಇವರಲ್ಲಿ ಸವಿತಾ ಮಹರ್ಷಿಗಳು  ಒಬ್ಬರು ,ಅವರ ಹೆಸರು  ಬ್ರಹ್ಮಪುರಾಣ ಮತ್ತು ವೇದಗಳಂತಹ  ಅನೇಕ ಹಿಂದೂ  ಧರ್ಮಗ್ರಂಥಗಳಲ್ಲಿ ಕಾಣಿಸಿಕೊಂಡಿದೆ.



                     ಸವಿತಾ ಮಹರ್ಷಿಗಳು

     ಕೆ.ಎಸ್. ಸಿಂಗ್ ರ  ಗ್ರಂಥದ ಪ್ರಕಾರ (2003-1144)  ಪುರಾಣದ ಪ್ರಕಾರ  ಒಮ್ಮೆ  ತ್ರಿಮೂರ್ತಿಗಳು (ಬ್ರಹ್ಮ,  ವಿಷ್ಣು,  ಮೇಹೇಶ್ವರ,) ಜೊತೆಗೆ  ಯಜ್ಞ  ಮಾಡುವಾಗ  ಶಿವನ  ಅತಿಯಾಗಿ  ಬೆಳೆದ  ಕೂದಲುಗಳು  ಅಗ್ನಿಗೆ  ತಾಗಿ ಸುಟ್ಟು ಅಶುಚಿಗೊಳ್ಳುತ್ತವೆ,  ಆಗ ಪಕ್ಕದಲ್ಲಿದ್ದ   ಪಾರ್ವತಿ ದೇವಿಗೆ  ಮುಜುಗರವಾಗಿ  ಅಶುಚಿಯಾದ  ಕೂದಲುಗಳನ್ನು ತೆಗೆಸುವಂತೆ ಪತಿಗೆ ವಿನಂತಿಸಿಕೊಳ್ಳುತ್ತಾಳೆ.  ಪತ್ನಿಯ ಸಲಹೆಯಂತೆ  ಶಿವನು ತನ್ನ  ದೇಹದ ಆದಿತ್ಯನ  ಸ್ಥಾನವಾದ  ಬಲಗಣ್ಣಿನಿಂದ  ಕ್ಷೌರಿಕರ  ಮೂಲ ಪುರುಷರಾದ  ಸವಿತಾ ಮಹರ್ಷಿಯವರು  ಪರಿಕರಗಳ ಪೆಟ್ಟಿಗೆ (ಹಡಪ) ಯೊಂದಿಗೆ ಪ್ರಕಟಗೊಳ್ಳುತ್ತಾರೆ.  ಸವಿತಾ ಮಹರ್ಷಿಯು  ಶಿವನ ಅಯಷ್ಕರ್ಮವನ್ನು  ಪೂರೈಸಿ ಶಿವನನ್ನು ಶುಚಿಗೊಳಿಸಿ  ತೃಪ್ತಿ ಪಡಿಸುತ್ತಾರೆ.  ಮಹರ್ಷಿಯ ಸೇವೆಯನ್ನು  ಪಡೆದು  ಸಂತೃಪ್ತನಾದ ಶಿವನು  ಸವಿತಾ  ಮಹರ್ಷಿಯನ್ನು ಆಶೀರ್ವದಿಸಿ  ಸಂಗೀತ ಸಾಧನಗಳನ್ನು  ಬಹುಮಾನವಾಗಿ ನೀಡುತ್ತಾರೆ.   ನಂತರ  ಬ್ರಹ್ಮದೇವರು  ಸವಿತಾ ಮಹರ್ಷಿಗಳಿಗೆ   ಧನ್ವಂತರಿಯ ಕೃಪೆಯೊಂದಿಗೆ  ರೋಗಗಳನ್ನು ಆಯುರ್ವೇದ  ಚಿಕಿತ್ಸೆಯಿಂದ ನಿವಾರಿಸುವ  ವರವನ್ನು  ನೀಡುತ್ತಾರೆ. ಇದಾದ  ನಂತರ  ಇತರೆ  ದೇವರಿಗೂ ಅಯಷ್ಕರ್ಮ  ಪೂರೈಸಿದ  ಸವಿತಾ ಮಹರ್ಷಿಯು  ಲೋಕ  ಕಲ್ಯಾಣಕ್ಕಾಗಿ ಈ ಸೇವೆಗಳು  ಅಗತ್ಯವಾದುದರಿಂದ  ತನ್ನ ಮೂರು ಸೇವೆಗಳನ್ನು  ಮುಂದುವರಿಸಿಕೊಂಡು ಬರುತ್ತಾರೆ. 

     ಪುರಾಣಗಳು  ಹೇಳುವಂತೆ ಶಿವನ  ಎರಡು  ಕಣ್ಣುಗಳು ಸೂರ್ಯ ಚಂದ್ರರು  ಅದ್ದರಿಂದ  ಒಂದು  ಕಣ್ಣು  ಎಂದರೆ  ಸೂರ್ಯನಿಂದ  ಸೃಷ್ಠಿಯಾದ್ದರಿಂದ  ಸೂರ್ಯನ ಒಂದು  ಹೆಸರಾದ  ಸವಿತ್ರು  ಎಂಬ ಪದದಿಂದ  ಮಹರ್ಷಿಗಳನ್ನು ಸವಿತಾ  ಮಹರ್ಷಿ  ಎಂಬ ಹೆಸರಿನಿಂದ  ಕರೆಯಲ್ಪಡುತ್ತಾರೆ. ಸವಿತಾ  ಎಂಬ  ಪದವು ಋಗ್ವೇದ ಹಾಗೂ ಇತರೆ  ವೇದಗಳಲ್ಲಿ ಸುಮಾರು 170  ಸಾರಿ ಬರುತ್ತದೆ.

    ಸೂರ್ಯನು  ಈ  ಬ್ರಹ್ಮಾಂಡದ ಕಣ್ಣು. ಸೂರ್ಯನ  ಕಿರಣಗಳು ಭೂಮಿಯ  ಬಹುತೇಕ  ಎಲ್ಲಾ ಜೀವಿಗಳಿಗೆ  ಆಧಾರವಾಗಿದ್ದು ಭೂಮಿಯ  ಹವಾಮಾನದ ಮೇಲೂ  ಪ್ರಭಾವ  ಬೀರುತ್ತವೆ. ಹಿಂದೂ  ಧರ್ಮದ  ಪ್ರಕಾರ ಸೂರ್ಯನು  ಕಣ್ಣಿಗೆ  ಕಾಣುವ ದೇವರೆಂದು ಸೂರ್ಯನಿಗೆ ಸುಮಾರು 108 ಹೆಸರುಗಳಿಂದ ಕರೆಯುತ್ತಾರೆ  ಮುಖ್ಯವಾಗಿ ರವಿ (ಬೆಂಕಿಯ ಪಕ್ಷಿ), ಆದಿತ್ಯ (ಅದಿತಿಯ ಮಗ), ಪುಷ  (ಪಾವನ ಮಾಡುವವನು), ದಿವಾಕರ (ದಿನದ ಆಗು ಹೋಗುಗಳ ಕಾರ್ಯಕರ್ತ), ಸವಿತಾ  (ಜೀವಕಳೆ ತುಂಬುವವರು), ಅರ್ಕ (ಸೂರ್ಯನ ಕಿರಣ),  ಮಿತ್ರ (ಸ್ನೇಹಿತ),  ಭಾನು  (ಬೆಳಕು ) ಭಾಸ್ಕರ  (ಬೆಳಕನ್ನು ಸೃಜಿಸುವವರು), ಮತ್ತು  ಗ್ರಹಪತಿ  (ಗ್ರಹ ಗಳ ರಾಜ). ಇತ್ಯಾದಿ  ಪ್ರಸಿದ್ಧವಾದ  ಹಿಂದೂ  ಧರ್ಮದ ಪೂಜಿಸುವ  ಪದ್ಧತಿಯಲ್ಲಿ ಮುಂಜಾನೆ  ಎದ್ದು  ಉದಯಿಸುವ ಸೂರ್ಯನನ್ನು  ಆರಾಧಿಸುವುದು (ಸೂರ್ಯ  ನಮಸ್ಕಾರ  ಸೂರ್ಯ ವಂದನೆ )  ಬೆಳೆದು  ಬಂದ  ದೈವ ಪದ್ಧತಿ . ಯೋಗದ  ಹತ್ತು ಭಂಗಿಗಳು  ಯಶಸ್ಸಿನ  ಚಲನೆಯ ಪ್ರತೀಕವಾಗಿದ್ದು, ಅದು ಒಂದು ನಮಸ್ಕಾರವಾಗಿದೆ.

   12 ಪವಿತ್ರ  ಹಿಂದೂ ಮಂತ್ರಗಳನ್ನು  ಹೇಳುತ್ತಾ, ಒಂದು ಮಂತ್ರದ  ಕೊನೆಗೆ ಒಂದು ನಮಸ್ಕಾರ ಎಂದು ಪರಿಗಣಿಸಲಾಗುತ್ತದೆ.  ಪ್ರಾಚೀನ ಕಾಲದಲ್ಲಿ  108  ನಮಸ್ಕಾರಗಳನ್ನು ಒಂದು ದಿನಕ್ಕೆ  ಅಭ್ಯಸಿಸಲಾಗುತ್ತಿತ್ತು.

 ಇವುಗಳನ್ನು  ಮಾಡುವುದು ಬಹಳ ಮಂಗಳಕರವೆಂದು ಹಿಂದೂಗಳು ನಂಬುತ್ತಾರೆ.

    ಸೂರ್ಯನಿಗೆ, ಮೂವರು ರಾಣಿಯರು  ಸಂಜನಾ, ರಾಗ್ಯಿ ಮತ್ತು  ಪ್ರಭಾ  ಸೂರ್ಯನ ಇಬ್ಬರು ಮಕ್ಕಳಾದ  ಶನಿ  ಮತ್ತು ಯಮರು ಮನುಷ್ಯ ಜೀವನದಲ್ಲಿ ಒಂದು ಜವಾಬ್ದಾರಿಯನ್ನು ನಿಭಾಯಿಸುತ್ತಾರೆ . 'ಶನಿ' ಯು ಮನುಷ್ಯ  ಜೀವನದ  ಒಂದೊಂದೂ  ಕಾರ್ಯದ ನಂತರವೂ ಫಲವನ್ನು ಅಥವಾ  ಶಿಕ್ಷೆಯನ್ನು  ಯೋಗ್ಯತೆಗೆ ಆನುಸಾರವಾಗಿ ನೀಡಿದರೆ,  'ಯಮ' ನು  ಮನುಷ್ಯನ ಸಾವಿನ ನಂತರ ಅವನು ಮಾಡಿದ ಕರ್ಮಗಳಿಗೆ ಫಲಿತಾಂಶ  ನೀಡುತ್ತಾರೆ..

       ರಾಮಾಯಣದಲ್ಲಿ ಸೂರ್ಯನನ್ನು  ರಾಜ  ಸುಗ್ರೀವನ ತಂದೆಯೆಂದು  ಕರೆಯಲಾಗಿದ್ದು, ಅಮಾನವೀಯ  ರಾವಣನನ್ನು ಸೋಲಿಸುವುದರಲ್ಲಿ  ಸುಗ್ರೀವನು ರಾಮ  ಮತ್ತು  ಲಕ್ಷ್ಮಣರಿಗೆ ಸಹಾಯ  ಮಾಡುತ್ತಾನೆ. ಹನುಮನಿಗೆ  ಅವನ  ಗುರುವಾಗಿ ತರಬೇತಿ ನೀಡುತ್ತಾನೆ.  ಸೂರ್ಯವಂಶ ಸಾಮ್ರಾಜ್ಯದ ರಾಜರುಗಳಲ್ಲಿ, ಶ್ರೀರಾಮನೂ ಒಬ್ಬನಾಗಿದ್ದು  ಮರ್ಯಾದ ಪುರುಷ  ಎಂದು ಕರೆಸಿಕೊಂಡಿದ್ದಾನೆ. 

     ಮಹಾಭಾರತದಲ್ಲಿ, ರಾಜಕುಮಾರಿ ಕುಂತಿಯು ಮಂತ್ರದ 'ಅದ್ಭುತ' ಶಕ್ತಿಯಿಂದ ಮಂತ್ರವನ್ನು ಸೂರ್ಯನ ಮೇಲೆ ಪ್ರಯೋಗಿಸಿದಾಗ  ಸೂರ್ಯನು ತನ್ನ  ಮಾಯಾ  ಶಕ್ತಿಯಿಂದ 'ಕುಂತಿ' ಗೆ ಕರ್ಣನೆಂಬ ಮಗುವೊಂದನ್ನು ದಯಪಾಲಿಸುತ್ತಾನೆ .ಕುರುಕ್ಷೇತ್ರದ ಮಹಾಯುದ್ಧದಲ್ಲಿ  ಕರ್ಣನು ಒಂದು ವಿಶೇಷ  ಪಾತ್ರವನ್ನು ಹೊಂದಿರುತ್ತಾನೆ.

ವೇದಗಳಲ್ಲಿ ಸವಿತಾ ಮಹರ್ಷಿ

     ವೇದಗಳಲ್ಲಿ  ವ್ಯಕ್ತ ವಾಗಿರುವಂತೆ  ಸವಿತಾ ಮಹರ್ಷಿಗಳು  ಮೂರು ಮುಖಗಳನ್ನು ಹೊಂದಿರುತ್ತಾರೆ  ಒಂದೊಂದು ಮುಖವು ಒಂದೊಂದು ವಿಶೇಷತೆಯನ್ನು  ಹೊಂದುರುತ್ತವೆ. 

ಮೊದಲನೆಯ ಮುಖ ಆಯುಷ್ಕರ್ಮವನ್ನು(ಆಯುಶ್ ಸಂಬ್ರುದ್ದಿ ರೂಪ)  

ಎರಡನೇ ಮುಖ  ಆಯುರ್ವೇದವನ್ನು(ಧನ್ವಂತರಿ ರೂಪ )  

ಮೂರನೆ ಮುಖ ಸಂಗೀತವನ್ನು (ವೇದ ಗಾಯನ ರೂಪ)

1. ಆಯುಶ್ ಸಂಬ್ರುದ್ದಿ ರೂಪ: 

        ಮನುಷ್ಯರು ತಾನು ಮಾಡಿದ ಪಾಪ ಅವನ ಕೂದಲಿನಲ್ಲಿ ಶೇಖರವಾಗುತ್ತದೆ  ಅವುಗಳನ್ನು ದೇಹದಿಂದ ಬೇರ್ಪಡಿಸಿದರೆ ಅವರಿಗೆ ಪಾಪದಿಂದ ಮುಕ್ತಿ ದೊರೆಯುತ್ತದೆ  ಎಂದು ಹಿಂದೂ ದರ್ಮದಲ್ಲಿ ಹೇಳಲಾಗಿದೆ. ಆದ್ದರಿಂದ ಅವರ ಕೂದಲುಗಳನ್ನು ತೆಗೆಯುವ ಬಗ್ಗೆ ಹಲವಾರು ಸಂಸ್ಕಾರಗಳು ಹಾಗೂ ಪದ್ದತಿಗಳು ಹಿಂದೂ  ಧರ್ಮದಲ್ಲಿ ಇವೆ. ದೇವತೆಗಳಿಗೂ ದೇಹದ ಕೂದಲುಗಳನ್ನು  ಹಲವು ಕಾರಣಗಳಿಂದ ತೆಗೆಸುವ ಅವಶ್ಯಕತೆ ಇರುತ್ತದೆ  ಎಂದು  ದೇವರಿಗೆ ಸವಿತಾ ಮಹರ್ಷಿಗಳು ಆಯುಷ್ಕರ್ಮವನ್ನು ಪೂರೈಸುವರೆಂದು, ಈ  ಕೆಲಸವನ್ನು ಪ್ರತಿನಿದಿಸುವ ಒಂದು ಮುಖವನ್ನು ಆಯುಷ್ಕರ್ಮ ರೂಪ ಅಥವಾ ಆಯುಶ್ ಸಂಬ್ರುದ್ದಿ ರೂಪ ಎಂದು ಕರೆಯಲಾಗುತ್ತದೆ.

2.  ಧನ್ವಂತರಿ ರೂಪ: 

       ಅಥರ್ವಣ ವೇದದ ಉಪವೇದವಾದ ಆಯುರ್ವೇದವು ಬ್ರಹ್ಮನಿಂದ  ಬಂದಿದೆಯೆಂದು ಹೇಳಲಾಗಿದೆ..  ಆದ್ದರಿಂದ ಅದು ವೇದದಷ್ಟೇ  ಪ್ರಾಚೀನ,  ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ ನಮಗೆ ಗೋಚರವಾಗುವ  ಎಲ್ಲ  ದ್ರವ್ಯಗಳೂ ಪಂಚ  ಮಹಾಭೂತಗಳ ಸಂಘಟನೆಯಿಂದಾಗಿ  ವೆಚೇತನಾ ದ್ರವ್ಯವೆನಿಸಿದ ಆತ್ಮನ ಸಂಯೋಗದಿಂದ  ಜೀವರಾಶಿಗಳು ಏರ್ಪಡುತ್ತವೆ. .  ಪ್ರಾಣಿ, ಸಸ್ಯ, ಖನಿಜ,  ಗಾಳಿ, ನೀರು ಮುಂತಾದುವುಗಳನ್ನು ಯುಕ್ತಿಯಿಂದ ಉಪಯೋಗಿಸಿಕೊಳ್ಳುತ್ತಾ ಮನುಷ್ಯ ತನ್ನ  ಜೀವನವನ್ನು ಸಾಗಿಸುತ್ತಾನೆ. ಸಾಧನ  ಚತುಷ್ಟಯ ಪುರುಷಾರ್ಥಗಳಾದ  ಧರ್ಮ, ಅರ್ಥ, ಕಾಮ  ಮತ್ತು  ಮೋಕ್ಷಗಳಿಗೆ ಮನುಷ್ಯನ ಶರೀರವೇ ಆಧಾರವಾದುದ್ದರಿಂದ  ದೇಹವನ್ನು ಯಾವ ಬಾಧೆಯೂ ಇಲ್ಲದಂತೆ ಬಹುಕಾಲ  ಕಾಪಾಡಲು  ಪ್ರಯತ್ನ ಪಡುತ್ತಾನೆ.  ಈ  ಆರೋಗ್ಯ ರಕ್ಷಣೆಯು  ಆಹಾರ, ನಿದ್ರೆ, ಬ್ರಹ್ಮಚರ್ಯೆ, ನಡವಳಿಕೆ ಮುಂತಾದವುಗಳನ್ನು ಆವಲಂಬಿಸಿದೆ.  ವಾಯು, ಅಗ್ನಿ ಮತ್ತು ಉದಕ. ಇವು  ಶರೀರದಲ್ಲಿ ವಾಯು, ಪಿತ್ತ  ಮತ್ತು ಕಫ ರೂಪದಲ್ಲಿರುತ್ತವೆ. ಇವುಗಳ ಗುಣ ಕರ್ಮಗಳು  ಶರೀರದ ಧಾತುಗಳಿಗೆ ಸಮಾನವಾಗಿದ್ದರೆ ದೇಹ  ಆರೋಗ್ಯವನ್ನೂ, ವಿಷಮವಾದರೆ ರೋಗಗಳನ್ನು ಮತ್ತು ಮರಣವನ್ನೂ ಉಂಟುಮಾಡುತ್ತವೆ.. ಸರಿಯಾದ ವ್ಯಾಯಾಮ, ಆಹಾರ ಮತ್ತು ನಿದ್ದೆ ಮಾಡುವ ಮನುಷ್ಯನಿಗೆ ರೋಗಗಳು ಪೀಡಿಸುವುದಿಲ್ಲ. ರೋಗಕ್ಕೆ ಕಾರಣವಾದುದನ್ನು (ರೋಗಹೇತು) ವರ್ಜಿಸುವುದು, ರೋಗದ ಲಕ್ಷಣಗಳಿಂದ (ಲಿಂಗ) ವಿಷಮ ದೋಷಗಳನ್ನು ಕಂಡುಹಿಡಿದು, ಅವುಗಳನ್ನು ಸಮಸ್ಥಿತಿಯಲ್ಲಿರಿಸಿ ಧಾತುಗಳ ಬಲವನ್ನು ಹೆಚ್ಚಿಸುವುದು (ಔಷಧ)- ಈ  ವೈದ್ಯ ಪದ್ಧತಿಯ ತತ್ವಗಳು.  ಔಷಧ  ಜ್ಞಾನವನ್ನು ಆನುಸರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಅವಶ್ಯಕ ಎಂದು ಆಯುರ್ವೇದ ಪದ್ದತಿಯಲ್ಲಿ ಹೇಳಲಾಗಿದೆ.  ಬ್ರಹ್ಮದೇವನಿಂದ ಅಮೃತ ಕಲಶವನ್ನು ಹಾಗು ರೋಗಗಳನ್ನು ನಿವಾರಿಸುವ ವರವನ್ನು ಪಡೆದ ಸವಿತಾ ಮಹರ್ಷಿಯು ವಿಷ್ಣುವಿನ ಅಂಶವಾದ  ದನ್ವಂತರಿಯ ಸಹಾಯವನ್ನು  ಪಡೆದು ಆಯುರ್ವೇದ  ಚಿಕಿತ್ಸೆ ನೀಡುವ ಪವಿತ್ರ. ಕಾರ್ಯದಲ್ಲಿ  ತೊಡಗುತ್ತಾರೆ.  ಈ ಕಾರ್ಯಕ್ಕೆ ಸಂಬಂದಿಸಿದ ಮುಖವನ್ನು ಧನ್ವಂತರಿ ರೂಪ ಎಂದು ಕರೆಯುತ್ತಾರೆ.

3. ವೇದ ಗಾಯನ ರೂಪ; 

      ಶಿವನ ಅಯುಷ್ಕರ್ಮವನ್ನು ಪೂರೈಸಿದ  ನಂತರ  ಶಿವನು ತೃಪ್ತನಾಗಿ  ಸಂಗೀತ  ಸಾಧನಗಳನ್ನು ನೀಡಿದ್ದರಿಂದ  ಹಾಗು  ಸವಿತಾ ಮಹರ್ಷಿಯವರು  ಸಂಗೀತ ಜ್ಞಾನವನ್ನು  ಹೊಂದಿದರೆಂದು ಹಾಗೂ  ಸಂಗೀತಕ್ಕೆ ಸಂಬಂಧಿಸಿದ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿದರೆಂದು. ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಕರೆಯುತ್ತಾರೆ.. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ  ಕೂಡಿದ ವೇದವಾಗಿದೆ.  ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯ ಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ.  ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ 78 ಮಂತ್ರಗಳು ಮಾತ್ರ ಹೊಸತಾಗಿವೆ. ಇದರಲ್ಲಿ 15 ಭಾಗಗಳಿದ್ದು 32 ಅಧ್ಯಾಯಗಳಿವೆ . ಗಾಂಧರ್ವವೇದವು  ಸಾಮವೇದದ ಉಪವೇದ. . ಈ ಕಾರ್ಯಕ್ಕೆ ಸಂಬಂದಿಸಿದ ಮೂರನೇ ಮುಖವನ್ನು ವೇದ ಗಾಯನ ರೂಪ ಎಂದು ಕರೆಯುತ್ತಾರೆ.

    ಸವಿತಾ ಮಹರ್ಷಿಗಳ ಮೂರು ಮುಖಗಳು ಪ್ರತಿನಿಧಿಸುವ ಮೂರು ಸೇವೆಗಳ ಮಧ್ಯ ಒಂದಕ್ಕೊಂದು ಸಂಬಂದಗಳಿವೆ. ಅಯುಷ್ಕರ್ಮದಿಂದ ದೇಹದ ಆರೋಗ್ಯವು ಲಭ್ಯವಾಗುತ್ತದೆ ಹಾಗೂ ದೇವರ ಸೃತಿಸಲು ದೇಹವು ಸಿದ್ಧವಾಗುತ್ತದೆ.. ಗಾನದಿಂದಲೂ ದೇಹದ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ಸಂಗೀತಕ್ಕೆ ಕಾಯಿಲೆಗಳನ್ನು  ಗುಣಪಡಿಸುವ ಶಕ್ತಿ ಇದೆ ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ. ಅಯುಷ್ಕರ್ಮ ಮಾಡುವ ಜನಾಂಗವು ಹಿಂದಿನಿಂದಲೂ ಹಲವು ಬಗೆಯ  ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದುದು ಇಲ್ಲಿ ನೆನಪಿಸಬಹುದು.

ಸವಿತಾ ಮಹರ್ಷಿಯ ಹಲವು ವಿಶೇಷಗಳು 

      ಸವಿತಾ ಮಹರ್ಷಿಯವರಿಗೆ  ಮೂರು ಮುಖಗಳ ಜೊತೆಗೆ ಆರು ಕೈಗಳಿದ್ದು ಅವುಗಳು ಅವರ ಅಪಾರ ಶಕ್ತಿ ಸಾಮರ್ಥ್ಯಗಳನ್ನು ಸಾಂಕೇತಿಕವಾಗಿ ತೋರಿಸುತ್ತದೆ.  ಒಂದು ಕೈಯಲ್ಲಿ ತಾವೇ ರಚಿಸಿದ  ಸಾಮವೇದ ಗ್ರಂಥವನ್ನು, ಎರಡನೇ  ಕೈಯಲ್ಲಿ   ಜಪಮಾಲೆಯನ್ನು, ಮೂರನೆ ಕೈಯಲ್ಲಿ ಅಮೃತದ ಕುಂಭವನ್ನು, ನಾಲ್ಕನೆ   ಕೈಯಲ್ಲಿ ಪದ್ಮ ಕಮಲವನ್ನು,  ಐದನೇ  ಕೈ ಅಭಯ ಹಸ್ತವಾಗಿ , ಆರನೇ ಕೈಯಲ್ಲಿ ವೀಣೆಯನ್ನು ಹಿಡಿದಿರುವದನ್ನು  ತೋರಿಸಲಾಗಿದೆ.  ಮುಂಬಾಗದಲ್ಲಿ  ಹಂಸ,  ಸಂಗೀತದ ಪರಿಕರಗಳು, ಆಯುಷ್ಕರ್ಮದ ಪರಿಕರಗಳು, ಕಮಂಡಲವನ್ನು  ವಿಶೇಷ ಅರ್ಥದೊಂದಿಗೆ ತೋರಿಸಲಾಗಿದೆ.  ಉದಾಹರಣೆಗೆ ಬ್ರಹ್ಮ ದೇವರ ಸೃಷ್ಟಿಗೆ ಕಾರಣವಾದ  ಕಮಲವು ಜ್ಞಾನ ಹಾಗು  ವಿಜಯದ ಸಂಕೇತವಾಗಿ, ನೀರಿನಲ್ಲಿರುವ ಹಾಲನ್ನು ಬೇರೆ ಮಾಡುವ ಸಾಮರ್ಥ್ಯವಿರುವ ಹಂಸವು ವಿದ್ಯೆ ಹಾಗು ಸರಿ ತಪ್ಪುಗಳನ್ನು  ಪ್ರತೇಕಿಸುವ ವಿವೇಕದ ಸಂಕೇತವಾಗಿ, ವೀಣೆಯು ಸಾಮವೇದದಿಂದಲೂ ರೂಡಿಯಲ್ಲಿರುವ ದೇವರನ್ನು ಒಲಿಸಲು ಬಳಸುವ  ಸಂಗೀತದ ಸಂಕೇತವಾಗಿಯೂ, ಅಮೃತ ಕುಂಭವು ಸವಿತಾ ಮಹರ್ಷಿಯ ಆಯುರ್ವೇದ ಚಿಕಿತ್ಸೆಯಿಂದ ಪ್ರಾಪ್ತವಾಗುವ ಅಮರತ್ವದ ಸಂಕೇತವಾಗಿಯೂ, ಜಪಮಾಲೆಯು ಭಕ್ತಿಯ ಸಂಕೇತವಾಗಿಯೂ, ತೋರಿಸಲಾಗಿದೆ . ಉಳಿದ ಪರಿಕರಗಳು ಮಹರ್ಷಿಯ ತ್ರಿವಿಧ  ಸೇವೆಗೆ ಅಗತ್ಯವಾದ ವಸ್ತುಗಳಾಗಿರುತ್ತವೆ.

      ಹಿಂದೂ ಧರ್ಮದ ಪ್ರಕಾರ ಮನುಷ್ಯನ ಪಾಪ ಕರ್ಮಗಳು ಆತನ ಕೂದಲಿನಲ್ಲಿ ಶೇಖರವಾಗಿರುತ್ತವೆ.  ಮನುಷ್ಯನ ಪಾಪ ವಿಮೋಚನೆ  ಆಗಬೇಕಾದರೆ ದೇಹದಿಂದ ಕೂದಲನ್ನು ಬೇರ್ಪಡಿಸಬೇಕಾಗುತ್ತದೆ ಹಾಗಾಗಿ  ಜನರು ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸಿ  ತಮ್ಮ ಪಾಪವನ್ನು  ಕಳೆಯುವ  ನಂಬಿಕೆ ಹಾಗೂ ಪದ್ದತಿ  ಮೊದಲಿನಿಂದಲೂ ಇದೆ.   ಆದ್ದರಿಂದ  ಕ್ಷೌರಿಕ  ವೃತ್ತಿಯನ್ನು ಆಯುಷ್ಕರ್ಮ ಎಂದು ಕರೆಯುತ್ತಾರೆ.   ಕ್ಷೌರಿಕ ವೃತ್ತಿಯು ಮನುಷ್ಯನ ಪಾಪ  ಕರ್ಮವನ್ನು  ಕಳೆದು  ಕೂದಲಿನಿಂದ  ಆಗುವ ಹಲವಾರು  ತೊಂದರೆಗಳಿಂದ  ಹಾಗು  ರೋಗಗಳಿಂದ  ದೂರ ಮಾಡುವ  ಹಾಗು  ಮನುಷ್ಯನನ್ನು ನಾಗರಿಕನನ್ನಾಗಿ  ಮಾಡುವ  ಪವಿತ್ರ ಕಾರ್ಯವಾಗಿದೆ.

ಸವಿತಾ ಮಹರ್ಷಿ ಜಯಂತಿ ಅಥವಾ ರಥ ಸಪ್ತಮಿ.

      ಸವಿತಾ ಮಹರ್ಷಿಯ  ಜಯಂತಿಯನ್ನು ಪ್ರತೀವರ್ಷ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿಯ ದಿನ  (ರಥ ಸಪ್ತಮಿ) ದಂದು ಆಚರಿಸಲಾಗುವುದು. ಇದು ಸೂರ್ಯನ  ಅರಾದನೆಯ  ವಿಶೇಷ ದಿನ.  ಈ  ದಿನದಂದು ಸೂರ್ಯನು. ಭೂಮಿಯ  ಸಮಭಾಜಕ ರೇಖೆಯಿಂದ  ಉತ್ತರದ  ಅಭಿಮುಖವಾಗಿ ಹಾದು ಹೋಗುತ್ತಾನೆ.  ಈ ವಿಶೇಷ  ದಿನದಂದು  ಹಗಲು  ರಾತ್ರಿಗಳ ಸಮಯ  ಸಮನಾಗಿರುತ್ತವೆ. ಈ  ಪವಿತ್ರ ದಿನದಂಡು   ಸೂರ್ಯನು  ಸಾಕ್ಷಾತ್  ಶ್ರೀಮನ್ನಾರಾಯಣನ ಪ್ರತಿರೂಪವಾಗಿರುತ್ತಾನೆ.  ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಆದ್ದರಿಂದ ಈ ಶುಭ ದಿನದಂದು ಸವಿತಾ ಮಹರ್ಷಿಯ ಜಯಂತಿಯನ್ನು ಆಚರಿಸಲಾಗುತ್ತದೆ.

    ಸೂರ್ಯನೂ , ಪ್ರತಿವರ್ಷ ಈ ದಿನ  ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ.  ತನ್ಮೂಲಕ ಭೂಮಿಯ  ನಿವಾಸಿಗಳಿಗೆ  ಚೈತನ್ಯ ನೀಡುತ್ತಾನೆ.  ಈ ಹಿನ್ನೆಲೆಯಲ್ಲಿ ಆತನನ್ನು  ಗೌರವಿಸುವ  ಸಲುವಾಗಿ  ರಥಸಪ್ತಮಿ ಆಚರಿಸಲಾಗುತ್ತಿದೆ. ಚಳಿಗಾಲದಲ್ಲಿ ಮುದುಡುವ ಮನುಷ್ಯರ  ಶರೀರ,  ರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ.  ‘"ಆರೋಗ್ಯಂ ಭಾಸ್ಕರಾದಿಚ್ಛೇತ್’"ಅಂದರೆ ಸೂರ್ಯ ಆರೋಗ್ಯದಾಯಿ. ಎಂದು ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ.  ಹೀಗಾಗಿಯೇ  ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಯು ವಿಗ್ರಹಾರಾಧನೆ ಬಳಕೆಗೆ ಬರುವ ಮೊದಲಿನಿಂದಲೂ ಆಚರಣೆಯಲ್ಲಿದೆ..   ಆಹಾರಕ್ಕಾಗಿ, ರೋಗ  ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ ಹಾಗೂ ವರಾಹ ಪುರಾಣಗಳಲ್ಲಿ  ಹೇಳಲಾಗಿದೆ. ರೋಗ ನಿವಾರಣೆ,  ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ.  ಬೆಳಗಿನ  ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ  ದಿನವಾದರೂ ಸೂರ್ಯಾರಾಧನೆಯನ್ನು ಮಾಡಿದರೆ  ಅರ್ಥಾತ್  ಆತನ ಕಿರಣಗಳಿಗೆ  ಸೂಕ್ತ  ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣ ಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

     ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.  ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ. ದ್ವಾಪರ  ಯುಗದಲ್ಲಿ  ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. 

       ಯಶೋವರ್ಮನೆಂಬ   ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಪರಿಹಾರಕ್ಕಾಗಿ ಜ್ಯೋತಿಷಿಗಳನ್ನು ಸಂಪರ್ಕಿಸಿದಾಗ ಅವರು  ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದರು. ಅದರಂತೆ   ಸೂರ್ಯಾರಾಧನೆ  ಮಾಡಿದಾಗ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು ಎಂದು ಹೇಳುತ್ತಾರೆ.

     ಪಾಂಡವರು ವನವಾಸದ ಅವಧಿಯಲ್ಲಿ  ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು  ಎಂದು ಹೇಳುತ್ತಾರೆ.

    ರಾವಣನ್ನು ಗೆಲ್ಲಲು ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. 

    ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿಯನ್ನು  ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಇದೆ. 

    ಹರ್ಷವರ್ದನನ ಆಸ್ಥಾನದಲ್ಲಿ ಇದ್ದ ಮಯೂರನೆಂಬ ಕವಿಯು ಸೂರ್ಯಶತಕವೆಂಬ ಗ್ರಂಥ ಬರೆದು ತನ್ನ ಕಳೆದುಕೊಂಡ  ಕಣ್ಣುಗಳನ್ನು ಮತ್ತೆ  ಪಡೆದನೆಂದು  ಹೇಳುತ್ತಾರೆ.

    ಶ್ರೀರಾಮ ಸೂರ್ಯವಂಶದ ರಾಜನಾದರೆ,  ಕರ್ಣ, ಸುಗ್ರೀವ, ನವಗ್ರಹಗಳಲ್ಲಿ  ಇರುವ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

    ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ.  ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೇ,  ಸೂರ್ಯನ ಅನುಗ್ರಹವು  ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.

    ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಆಚರಣೆಯಲ್ಲಿದೆ.  ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. 

ಸೂರ್ಯನ  ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು.  ಕಾಲ ಗಣನೆಯಲ್ಲಿ ಸೌರಮಾನ ಪದ್ದತಿ  ಇಂದಿಗೂ ಇದೆ.  ಇನ್ನು, ‘ಭೂರ್ಭುವಸ್ವಃ'. ಎಂಬ ಗಾಯತ್ರಿ ಮಂತ್ರದಲ್ಲಿ ಬರುವ  ಪ್ರತಿ ಶಬ್ದವು ಸೂರ್ಯನ  ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

     ಸೂರ್ಯನ  ಕಿರಣಗಳಲ್ಲಿನ ಸತ್ವಗಳನ್ನು  ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. 

ಎಕ್ಕದ  ಎಲೆಗಳಿಗೆ  ಚರ್ಮಕ್ಕೆ ಸಂಬಂಧಿಸಿದ  ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ,  ಅಷ್ಟೇ  ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಮತ್ತು ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ  ಪರಿಹಾರ ದೊರೆಯುತ್ತದ.  ಹೀಗಾಗಿಯೇ ಈ ದಿನ ಎಕ್ಕದ ಎಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

 ಲೇಖನ:  ಶ್ರೀ ವೆಂಕಟಾಚಲಪತಿ.ಪಿ.ಬಿ.-ದಾವಣಗೆರೆ-ಫೋ: 9901196772  



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

012 ಕ್ಷೌರಿಕರು ಹಾಗೂ ಮಂಗಳವಾರದ ರಜಾದಿನ- ವೆಂಕಟಾಚಲಪತಿ.ಪಿ.ಬಿ.- ದಾವಣಗೆರೆ. 9901196772

005 ಕ್ಷೌರಿಕ ವೃತ್ತಿಯ ಉಗಮ- ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ