012 ಕ್ಷೌರಿಕರು ಹಾಗೂ ಮಂಗಳವಾರದ ರಜಾದಿನ- ವೆಂಕಟಾಚಲಪತಿ.ಪಿ.ಬಿ.- ದಾವಣಗೆರೆ. 9901196772


ಕ್ಷೌರಿಕರು  ಹಾಗೂ ಮಂಗಳವಾರದ ರಜಾದಿನ    
ವೆಂಕಟಾಚಲಪತಿ.ಪಿ.ಬಿ.-  ದಾವಣಗೆರೆ.   9901196772 
ಕ್ಷೌರಿಕರು  ಹಾಗೂ ಮಂಗಳವಾರದ ರಜಾದಿನ
ಇತ್ತೀಚಿನ ದಿನಗಳಲ್ಲಿ  ಕೋರೋನಾ ಖಾಯಿಲೆಯಿಂದ  ಉಂಟಾದ ಸಮಸ್ಯೆಯಿಂದ ಕಾಪಾಡುವ ಉದ್ದೇಶದಿಂದ ಸರ್ಕಾರವು ಕೆಲವು
ಭಾನುವಾರಗಳ ಮಟ್ಟಿಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಆದೇಶ ನೀಡಿರುವದರಿಂದ ಕೆಲವು ಸಮಾಜ ಪರ ಚಿಂತಕರಿಗೆ ಕ್ಷೌರಿಕ ಅಂಗಡಿಗಳು ಮಂಗಳವಾರದ ಬದಲು ಭಾನುವಾರ ರಜೆ ಮಾಡಿದರೆ ಹೇಗೆ ಎಂಬ ಚಿಂತನೆಯನ್ನು ಮೂಡಿಸಿದೆ.ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಪ್ರಾರಂಭವಾಗಿದೆ. ಈ ನಿರ್ಣಯದ ಅನುಕೂಲಗಳು ಮತ್ತು ಅನಾನುಕೂಲತೆಗಳ ಬಗ್ಗೆ ಮತ್ತೋಮ್ಮೆ ಪರಿಶೀಲಿಸುವ ಸಂದರ್ಭ ಒದಗಿ ಬಂದಿದೆ. ಇದರ ಬಗ್ಗೆ ನನಗೆ ತಿಳಿದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ.     

ಭಾನುವಾರ ರಜಾದಿನ ಮಾಡಿದರೆ ಅನುಕೂಲಗಳು:
01.ನಮ್ಮ ಸಂಘಟನೆಗಳು ಬಲಗೊಳ್ಳುತ್ತವೆ:
       ನಮಲ್ಲಿ ಹೆಚ್ಚಿನ ಸಬೆ ಸಮಾರಂಭಗಳುಇತರೆ ಕಾರ್ಯಕ್ರಮಗಳು ಬಾನುವಾರ ಏರ್ಪಡಿಸುವದರಿಂದ ನಮ್ಮ ಕ್ಷೌರಿಕ ಭಂದುಗಳು ಅವುಗಳಲ್ಲಿ ಭಾಗವಹಿಸಲಾಗದೆ ಸಾಮಾಜಿಕವಾಗಿ, ರಾಜಕೀಯವಾಗಿ ದೂರವೇ ಉಳಿಯುತಿದ್ದಾರೆ.ಇದರಿಂದ ನಮ್ಮ  ಜನ ನಾಯಕರಾಗದೆ ಕೇವಲ ತಮ್ಮ ಎಲ್ಲಾ ಶ್ರಮವನ್ನು ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಸೀಮಿತಗೊಳಿಸಿ ಬಾವಿಯೊಳಗಿನ ಕಪ್ಪೆಯಂತೆ ತಮ್ಮದೇ ಪ್ರಪಂಚದಲ್ಲಿ ಜೀವಿಸುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಭಾನುವಾರದ ರಜಾದಿನ ಅವಶ್ಯಕ. ಜೊತೆಗೆ ನಮ್ಮ ಜನಾಂಗದ ನೌಕರರು ವ್ಯಾಪಾರಿಗಳು ಸಂಘಟನೆಯ ಕೆಲಸದಲ್ಲಿ ಬಾಗವಹಿಸಿ ಸಂಘಟನೆಯನ್ನು ಬೆಳೆಸಬಹುದು.
 02.ಸಾಮಾಜಿಕವಾಗಿ ಇತರೆಯವರಲ್ಲಿ ಬೇರೆಯಬಹುದು:
       ಭಾನುವಾರದ ದಿನ ಎಲ್ಲಾ ಸರ್ಕಾರಿ ಕಚೇರಿಗಳು,ಖಾಸಗಿ ಕಂಪನಿಗಳು, ವ್ಯಾಪಾರಿ ಅಂಗಡಿಗಳು,ಬ್ಯಾಂಕುಗಳು,ರಜೆ ಇರುತ್ತದೆ ಕ್ಷೌರಿಕರಲ್ಲದ ತಮ್ಮ ಭಂದುಗಳನ್ನು,  ಮಕ್ಕಳನ್ನು,ಸ್ನೇಹಿತರನ್ನು ವ್ಯಯಕ್ತಿಕವಾಗಿ ಬೇಟಿಯಾಗುವ ಅವರೊಂದಿಗೆ ಬೆರೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಜೊತೆಗೆ ಇವರು ಕೆಲವು ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಂದಲೂ ದೂರವಾಗಿ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರವೆಂದರೆ ಭಾನುವಾರ ರಜೆ ಘೋಷಿಸುವದು  ಎನ್ನುವುದು ನಮ್ಮ ನಾಯಕರ ಅಭಿಪ್ರಾಯ.
03.ಉತ್ತಮ ಕೌಟುಂಬಿಕ ಜೀವನ:
      ಪ್ರಸ್ತುತ ಮಂಗಳವಾರದ ರಜೆ ನಮ್ಮನ್ನು ಎಲ್ಲರಂತೆ ಹೆಂಡತಿ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಸಾದ್ಯವಾಗುತ್ತಿಲ್ಲ. ಭಾನುವಾರ ಶಾಲಾಕಾಲೇಜುಗಳು ರಜೆ ಆದರೆ ಕ್ಷೌರಿಕನಿಗೆ ಕೈತುಂಭಾ ಕೆಲಸ, ಮಂಗಳವಾರ ಕ್ಷೌರಿಕನಿಗೆ ರಜಾ ಆದರೇ ಮಕ್ಕಳಿಗೆ, ಅಣ್ಣ ತಮ್ಮಂದಿರಿಗೆ ರಜೆ ಇರುವುದಿಲ್ಲ.  ಇತರೆ ದಿನಗಳಲ್ಲಿ  ಬೆಳೆಗ್ಗೆ ಯಿಂದ ರಾತ್ರಿಯವರೆಗೂ ಅಂಗಡಿಯಲ್ಲಿ ಇರುವ ಸ್ಥಿತಿ. ಇದರಿಂದ ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಕ್ಷೌರಿಕರು ಎದುರಿಸಬೇಕಾಗುತ್ತದೆ.
04.ವೃತ್ತಿ ಗೌರವದ ಹೆಚ್ಚಳ:
      ಭಾನುವಾರ ರಜೆ ಮಾಡುವುದರಿಂದ ಕ್ಷೌರಿಕ ವೃತ್ತಿಗೆ ಗೌರವ ಹೆಚ್ಚಾಗುತ್ತದೆ. ಎಲ್ಲರಂತೆಯೇ ನಾವು ಎಂದು ತೋರಿಸಲು ಭಾನುವಾರದ ರಜೆಯೂ ಸಹಕಾರಿ. ಕ್ಷೌರಿಕನ ಸೇವೆ ಯಾವಾಗ ಬೇಕಾದರೂ ನಾವು ಪಡೆಯಬಹುದು ಎಂದು ನಮ್ಮ ವೃತ್ತಿಯನ್ನು ಅಗೌರವದಿಂದ ನೋಡುವ ಜನರಿಗೆ ಕ್ಷೌರಿಕರ ಸೇವೆಗೂ ನಾವು ಕಾಯಬೇಕು ಎಂಬ ಸನ್ನಿವೇಶವನ್ನು ಸೃಷ್ಟಿ ಮಾಡಿದಂತೆ ಹಾಗುತ್ತದೆ. ಇದರಿಂದ ಕ್ಷೌರಿಕ ವೃತ್ತಿಗೆ ಗೌರವ ಹೆಚ್ಚಾಗುತ್ತದೆ. 
05.ಮೂಡ ನಂಬಿಕೆಗಳಿಗೆ ಪೂರ್ಣವಿರಾಮ:
      ಮಂಗಳವಾರ ಕ್ಷೌರ ಮಾಡಿಸಬಾರದು, ಇದು ಅಮಂಗಳ ಎಂಬ ಮೂಡ ನಂಬಿಕೆಗಳಿಗೆ ನಾವೇ ಮಂಗಳವಾರ ರಜೆ ಮಾಡಿ ಜನರ ಮೂಡ ನಂಬಿಕೆಗಳನ್ನು ನಾವೇ ಪೋಷಿಸುತ್ತಿದ್ದೇವೆ. ಈ ಮೂಡನಂಬಿಕೆಗಳು ತೊಲಗಿಸಲು ಕ್ಷೌರಿಕರು ಮಂಗಳವಾರದ ಬದಲು ಭಾನುವಾರ ರಜೆ ಮಾಡಬೇಕು ‌ಸೂಕ್ತ ಎಂಬುದು ಕೆಲವರ ಅಭಿಪ್ರಾಯ.  

ಭಾನುವಾರ ರಜಾದಿನ ಮಾಡಿದರೆ ಅನಾನುಕೂಲಗಳು
         01. ಆರ್ಥಿಕವಾಗಿ ಹೊಡೆತ:
      ವರ್ಷದಲ್ಲಿ  ಸುಮಾರು 52 ಭಾನುವಾರಗಳು, 52 ಮಂಗಳವಾರಗಳು, ಬಂದ್ಗಳು, ಲಾಕ್ ಡೌನ್ ಗಳು, ಅಮವಾಸೆಗಳು, ಶ್ರಾವಣ ಮಾಸದ ಪೂಜೆಗಳು, ಆಷಾಡ ಮಾಸದ ಮಳೆಗಾಲ, ಹಬ್ಬಗಳು, ನೆಂಟರ, ಸ್ನೇಹಿತರ ಮದುವೆ ಸಮಾರಂಭಗಳು, ಸಂಬಂದಿಕರ ಸಾವುನೋವುಗಳು ಇವೆಲ್ಲದರ ನಡುವೆ ದುಬಾರಿ ಬಾಡಿಗೆಗಳು, ಕೆಲಸಗಾರರ ಸಮಸ್ಯೆಗಳು ಇಂತಹ ಹಲವು ಸಮಸ್ಯೆಗಳು ನಮ್ಮ ಕ್ಷೌರಿಕ ವೃತ್ತಿದಾರರಿಗೆ ಭಾನುವಾರದ ರಜೆ ದೊಡ್ಡ ಸಮಸ್ಯೆಯನ್ನೇ ತರಬಹುದು.     
02.ಕಚೇರಿ ಕೆಲಸಗಳಿಗೆ ತೊಂದರೆ:
     ಈಗಿನ ಪರಿಸ್ಥಿತಿಯಲ್ಲಿ ಕ್ಷೌರಿಕರು  ಮಂಗಳವಾರವನ್ನು ತನ್ನ ಸರ್ಕಾರಿ ,ಬ್ಯಾಂಕ್ ಕೆಲಸಗಳು, ಪ್ರಯಾಣ  ಮುಂತಾದ ಕೆಲಸ ಗಳಿಗೆ ಉಪಯೋಗಿಸುತ್ತಾರೆ .  ಭಾನುವಾರ ರಜೆ ಮಾಡಿದರೆ ಅವರ ಸರ್ಕಾರಿ ಕಚೇರಿಗಳ ಕೆಲಸಗಳು, ಬ್ಯಾಂಕ್ ಇತರೆ ಕೆಲಸಗಳಿಗೆ  ಬೇರೆ ದಿನವೂ ಅಂಗಡಿಯನ್ನು ಬಿಟ್ಟು ಹೋಗಬೇಕಾಗುತ್ತದೆ.  ಈ ಸಮಸ್ಯೆಗಳು ಭಾನುವಾರದ ರಜೆಗೆ ತೊಡಕಾಗಬಹುದು.
03.ಸಂಘಟನೆಗೆ ಬಲ ಅನುಮಾನ:  
     ಸಂಘಟನೆಗಳಿಗೆ ಬಲ ಬರುವ ಬಗ್ಗೆ ಭಾನುವಾರದ ರಜೆ ಅನುಕೂಲ ಎಂದು ಭಾವಿಸುವ ನಮಗೆ ಈಗಿನ ನೌಕರರ ಸಂಘಟನೆಗಳನ್ನು ,ಇತರೆ ಸಂಘಟನೆಗಳನ್ನು ನೋಡಿದರೆ ಅವುಗಳಲ್ಲಿ ಸದಸ್ಯರು ಭಾಗವಹಿಸುವ ರೀತಿ ,ಕೆಲವು ಕಡೆ ವೃತ್ತಿ ಸಂಘಟನೆಗಳಲ್ಲಿ ನೌಕರರನ್ನು ದೂರವಿರುಸುವ ಮನೋಭಾವ ಮುಂತಾದ ಕಾರಣಗಳು ನಮ್ಮ ಸಂಘಟನೆಗಳಿಗೆ ಹೆಚ್ಚಿನ ಬಲ ತುಂಬುವುದರ ಬಗ್ಗೆ ಅನುಮಾನಗಳನ್ನು ಮೂಡಿಸುತ್ತದೆ. 
04.ಗ್ರಾಹಕರ ಅಸಮಾದಾನ:    
      ಯಾವುದೇ ಸೇವಾ ವಲಯವು ಬೆಳೆಯ ಬೇಕಾದರೆ ಗ್ರಾಹಕರ ಹಿತದೃಷ್ಟಿಯಿಂದ ನಿರ್ಣಯಗಳನ್ನು ತೀರ್ಮಾನಿಸ ಬೇಕಾಗುತ್ತದೆ. ಭಾನುವಾರ ಎಲ್ಲರ ರಜೆ ಇದ್ದು ಅಂದು ನಮ್ಮ ಕ್ಷೌರಿಕರು ಇತರೆ ದಿನದ ಎರಡು ಅಥವಾ ಮೂರು ಪಟ್ಟು ಆದಾಯವನ್ನು ಗಳಿಸುತ್ತಾರೆ. ಇದರಿಂದ ಗ್ರಾಹಕರಿಗೂ ಕ್ಷೌರಿಕರಿಗೂ ಅನುಕೂಲವಾಗುತ್ತಿದೆ. ಭಾನುವಾರದ ರಜೆ ಬ್ರಿಟಿಷರ ಕೊಡುಗೆ, ನಮ್ಮ ರೈತರಿಗೆ ಸೋಮವಾರ ರಜೆ, ನಮ್ಮ ಊರಿನಲ್ಲಿ ಭಾನುವಾರವೇ ಸಂತೆ, ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವವರು ಯಾರು.
05.ಉತ್ತಮ ಕೌಟುಂಬಿಕ ಜೀವನದ ಖಾತ್ರಿ ಇಲ್ಲ:
     ನಮ್ಮ ಕೆಲವು ಕ್ಷೌರಿಕ ಭಂದುಗಳು ಈಗ ತಮ್ಮ ಮಂಗಳವಾರದ ರಜೆಯನ್ನು ಗಳಿಸುವ ರೀತಿ ನಮಗೆ ಹಲವು ಅನುಮಾನಗಳನ್ನು ಮೂಡಿಸುತ್ತದೆ. ಮಂಗಳವಾರ ಮದ್ಯಾಹ್ನ ತಾನೊಬ್ಬನೇ ಹೊರಗೆ ಹೂಗುವ ರೀತಿ , ಕುಡಿತ, ಜೂಜು, ಮುಂತಾದ ಚಟಗಳಲ್ಲಿ ತೊಡಗುವ ನಮ್ಮವರ ವಿಷಯಗಳು ನಮ್ಮ ಬಹುಪಾಲು ದೊಡ್ಡ ನಗರಗಳ ಜನರಿಗೆ ತಿಳಿದಿಲ್ಲ. ಇಂತವರಿಗೆ ಭಾನುವಾರದ ರಜೆ ಯಾವ ರೀತಿ ಅನುಕೂಲವಾಗಬಹುದು ಎಂಬುದರ ಬಗ್ಗೆ ನಮ್ಮ ನಾಯಕರು ಯೋಚಿಸಬೇಕಾಗುತ್ತದೆ.   
06. ಎಲ್ಲಾ ಕ್ಷೌರಿಕರ  ಒಪ್ಪಿಗೆಯ ಸಮಸ್ಯೆ:  
    ಇಂತಹ  ಪ್ರಮುಖ ತೀರ್ಮಾನಗಳಿಗೆ ನಮ್ಮ ಜನ ಹೇಗೆ ಸ್ಪಂದಿಸುತ್ತಾರೆ ಎಂಬುದು ಒಂದು ಯಕ್ಷ ಪ್ರಶ್ನೆ. ಇಂದಿಗೂ ಕೆಲವು ನಗರಗಳಲ್ಲಿ ರಜೆ ಮಾಡುವ ವಿಷಯದಲ್ಲಿ ಜಗಳಗಳು ತಾರಕಕ್ಕೆ ಹೋಗಿ  ಪೊಲೀಸ್ ಠಾಣೆಯವರೆಗೂ ಹೋಗಿರುವ ಹಲವಾರು ಉದಾಹರಣೆಗಳು ನಮ್ಮಲ್ಲಿ ಇವೆ. ಇದರ ಬಗ್ಗೆಯೂ  ಯೋಚಿಸುವ ಅಗತ್ಯವಿದೆ.
        ಇವುಗಳಲ್ಲಿ ಕೆಲವು ನನ್ನ ವ್ಯಯಕ್ತಿಕ ಅನುಭವಗಳು ಇವು ಎಲ್ಲಾ ನಗರಗಳಲ್ಲಿ ಇದಕ್ಕೆ ವಿಭಿನ್ನವಾದ ಪರಿಸ್ಥಿತಿ ಇರಬಹುದು ಆದ್ದರಿಂದ  ಇದರ ಬಗ್ಗೆ ತೀರ್ಮಾನಿಸುವಾಗ ಯೋಚಿಸಿ ತೀರ್ಮಾನಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ.
ವೆಂಕಟಾಚಲಪತಿ.ಪಿ.ಬಿ.
 ದಾವಣಗೆರೆ. 9901196772

ಕಾಮೆಂಟ್‌ಗಳು

  1. ಈ ಕುರಿತು ಸರ್ವೆ ಸಾಧಾರಣೆ ಸಭೆ ನಡೆಸಿ ಚರ್ಚೆ ಮಾಡಿ ಜನರ ಸ್ಪಂದನೆ ಅವರ ಆಲೋಚನೆ ಗಳು ತಿಳುದುಕೊಂಡು ನಿರ್ದಾರ ಮಾಡುವದು ಉಳಿತು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

005 ಕ್ಷೌರಿಕ ವೃತ್ತಿಯ ಉಗಮ- ಲೇಖನ ಶ್ರೀ ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ

ಸವಿತಾ ಮಹರ್ಷಿಯ ವೃತ್ತಾಂತ ವೆಂಕಟಾಚಲಪತಿ.ಪಿ.ಬಿ ದಾವಣಗೆರೆ