001.. ಕ್ಷೌರಿಕ - ಅರ್ಥ ಮತ್ತು ವ್ಯಾಪ್ತಿ.
001 ಕ್ಷೌರಿಕ - ಅರ್ಥ ಮತ್ತು ವ್ಯಾಪ್ತಿ. BARBER-MEANING & SCOPE.
ಪರಿಚಯ
ಕ್ಷೌರಿಕ ಎಂಬ ಪದಕ್ಕೆ ಇಂಗ್ಲಿಷ್‌ನಲ್ಲಿ “ಬಾರ್ಬರ್” ಎಂಬ ಪದವನ್ನು ಸಮಾನಾರ್ಥವಾಗಿ ಬಳಸಲಾಗುತ್ತದೆ. ಈ ಪದವು ಲ್ಯಾಟಿನ್ “ಬಾರ್ಬೊ” ದಿಂದ ಬಂದಿದೆ, ಇದರ ಅರ್ಥ “ಗಡ್ಡ”. ಅದರಿಂದ, ಕ್ಷೌರಿಕ ಎಂದರೆ ತಲೆ ಮತ್ತು ಮುಖದ ಮೇಲಿನ ಕೂದಲುಗಳನ್ನು ಕಲಾತ್ಮಕವಾಗಿ ತೆಗೆಯುವ ವೃತ್ತಿವಂತರಾಗಿರುವವರು. ಗ್ರೀಕ್‌ನಲ್ಲಿ ಕ್ಷೌರಿಕರನ್ನು “ಟಾನ್ಸರ್ಸ್” (Tensors) ಎಂದು ಮತ್ತು ಫ್ರೆಂಚ್‌ನಲ್ಲಿ “ಕೈಫ್ಫೂರ್” (Coiffeur) ಎಂದೂ ಕರೆಯುತ್ತಾರೆ. ಕೆಲವು ಭಾರತೀಯ ಭಾಷೆಗಳಲ್ಲಿ ಇದನ್ನು “ಕ್ಷೌರಿಕ್” ಎಂದು ಉಚ್ಛಾರಣೆ ಮಾಡಲಾಗುತ್ತದೆ, ಇದು ಸಂಸ್ಕೃತದ “ಕ್ಷುರಾ” (ಕತ್ತಿ) ಪದದಿಂದ ಉಗಮಗೊಂಡಿದೆ. ಅಂದರೆ ಕ್ಷೌರಿಕ ಎಂದರೆ ಕತ್ತಿಯನ್ನು ಬಳಸಿ ಕೂದಲನ್ನು ಕತ್ತರಿಸುವ ವ್ಯಕ್ತಿ ಎಂಬ ಅರ್ಥ.
ವೆಬ್ಸ್ಟರ್ಸ್ ಪದಕೋಶದ ಪ್ರಕಾರ, ಕ್ಷೌರಿಕ ಎನ್ನುವುದು ಕೂದಲನ್ನು ಕತ್ತರಿಸುವ, ವಿನ್ಯಾಸ ಮಾಡುವ, ಗಡ್ಡದ ಕೂದಲು ತೆಗೆಯುವ ಮತ್ತು ಇನ್ನೆರಡು ಕೂದಲಿಗೆ ಸಂಬಂಧಿಸಿದ ಸೇವೆಗಳನ್ನು ನೀಡುವ ವ್ಯಕ್ತಿಯನ್ನು ಸೂಚಿಸುತ್ತದೆ. ಕ್ಷೌರಿಕರಿಗಾಗಿ “ನಾಯಿ”, “ನಾಪಿತ”, “ಹಡಪಿಗ”, “ನಾವಿದ” ಮುಂತಾದ ಹಲವಾರು ಪದಗಳು ಹೋಲಿಕೆ ಆಗುತ್ತವೆ. ಅವನ ಕೆಲಸದ ಸ್ಥಳವನ್ನು ಕ್ಷೌರಿಕರ ಅಂಗಡಿ ಅಥವಾ ಕ್ಷೌರಕುಟೀರ (Salon) ಎಂದು ಕರೆಯುತ್ತಾರೆ.
ಕ್ಷೌರಿಕ ಮತ್ತು ಕೇಶ ವಿನ್ಯಾಸಕ | BARBER AND HAIR STYLIST
ಕ್ಷೌರಿಕ ಮತ್ತು ಕೇಶ ವಿನ್ಯಾಸಕ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸಬಹುದು, ಆದರೆ ಅವುಗಳಲ್ಲ ಕೆಲವು ಪ್ರಮುಖ ವ್ಯತ್ಯಾಸಗಳಿವೆ:
ಲಕ್ಷಣಗಳು ಕ್ಷೌರಿಕ ಕೇಶ ವಿನ್ಯಾಸಕ ವ್ಯಾಖ್ಯಾನ ತಲೆ ಮತ್ತು ಮುಖದ ಕೂದಲನ್ನು ಕತ್ತರಿಸುವ, ತೆಗೆಯುವ, ವಿನ್ಯಾಸ ಮಾಡುವ ವೃತ್ತಿ. ಕ್ಷೌರಿಕರ ಕೆಲಸದ ಜೊತೆಗೆ ಕೇಶ ವಿನ್ಯಾಸ ಮತ್ತು ಸೌಂದರ್ಯ ಸೇವೆಗಳನ್ನು ನೀಡುವ ವೃತ್ತಿ. ಇತಿಹಾಸ ನಾಗರಿಕತೆಯ ಆರಂಭದಿಂದಲೂ ಅಸ್ತಿತ್ವದಲ್ಲಿದೆ. ಇತ್ತೀಚೆಗೆ 17ನೇ ಶತಮಾನದ ನಂತರ ಪ್ರಸಿದ್ಧಿ ಪಡೆದ ವೃತ್ತಿ. ಉಪಕರಣ ಹಾಗೂ ತರಬೇತಿ ಕಡಿಮೆ ಉಪಕರಣಗಳು ಮತ್ತು ತರಬೇತಿ ಅಗತ್ಯವಿದೆ. ಹೆಚ್ಚಿನ ಉಪಕರಣಗಳು ಮತ್ತು ತರಬೇತಿ ಅಗತ್ಯ. ಬಂಡವಾಳ ಮತ್ತು ನಿರ್ವಹಣೆ ಕಡಿಮೆ ಬಂಡವಾಳ ಮತ್ತು ನಿರ್ವಹಣೆ ವೆಚ್ಚ. ಹೆಚ್ಚು ಬಂಡವಾಳ ಹಾಗೂ ನಿರ್ವಹಣೆ ವೆಚ್ಚ. ಸೇವೆ ನೀಡುವ ಸ್ಥಳ ಕ್ಷೌರಕುಟೀರ (Salon). ಹೇರ್ ಸಲೂನ್ (Hair Salon). ಗ್ರಾಹಕರ ವర్గ ವಿಶೇಷವಾಗಿ ಪುರುಷ ಮತ್ತು ಮಕ್ಕಳಿಗೆ ಸೇವೆ. ಪುರುಷ ಮತ್ತು ಮಹಿಳಾ ಎರಡರಿಗೂ ಸೇವೆ ನೀಡುತ್ತಾರೆ. ಸೇವೆಗಳ ಸ್ವಭಾವ ತ್ವರಿತ ಮತ್ತು ಸರಳ ಕ್ಷೌರ ಸೇವೆಗಳು. ಶೃಂಗಾರ ಮತ್ತು ಕೇಶ ವಿನ್ಯಾಸ ಸೇವೆಗಳು, ಹೆಚ್ಚು ಸಮಯದ ಅಗತ್ಯ. ಗೂಢಲಾವಣೆಯ ಮಟ್ಟ ಕೂದಲಿನ ಹಾಗೂ ಶೃಂಗಾರದ ಬಗ್ಗೆ ಕಡಿಮೆ ತಿಳಿವು. ಹೆಚ್ಚು ತಿಳಿವು ಮತ್ತು ಪರಿಣತಿ. ಕ್ಷೌರಿಕರು ಮತ್ತು ಪ್ರಸಾಧನಕಾರರು | BARBERS AND COSMETOLOGISTS
ಕ್ಷೌರಿಕರು: ಕೂದಲು ಕತ್ತರಿಸುವ, ಗಡ್ಡ ತೂದಲು, ಶೃಂಗಾರ ಮಾಡಲು ಯಂತ್ರಕತ್ತರಿಗಳು, ಕ್ಷೌರಕತ್ತಿಗಳು, ಶೃಂಗಾರ ಉಪಕರಣಗಳನ್ನು ಬಳಸುತ್ತಾರೆ.ಪ್ರಸಾಧನಕಾರರು: ಕೇಶ ವಿನ್ಯಾಸ, ಮುಖದ ತ್ವಚಾ ಶುಷ್ಕತೆ, ಶೃಂಗಾರ ವಸ್ತುಗಳು, ಉಗುರು ಅಲಂಕಾರ, ಪಾದೋಪಚಾರ, ಕೇಶಕಸಿ, ಶಾಶ್ವತ ಕೂದಲು ತೆಗೆಯುವ ಚಿಕಿತ್ಸೆಗಳು, ಎಲೆಕ್ಟ್ರೋಲಜಿ ಮತ್ತು ಚರ್ಮದ ತುರ್ತು ಚಿಕಿತ್ಸೆ ಮುಂತಾದ ಸೇವೆಗಳನ್ನು ನೀಡುತ್ತಾರೆ.ಕ್ಷೌರಿಕರು ಮತ್ತು ಪ್ರಸಾಧನಕಾರರು ಕೆಲ ವೇಳೆ ಪರಸ್ಪರ ಸಮಾನಾರ್ಥಕ ಪದಗಳಂತೆ ಬಳಸಲ್ಪಡುವರೂ ಸಹ, ಇವರಲ್ಲಿ ವ್ಯತ್ಯಾಸಗಳಿವೆ.
ಕ್ಷೌರಿಕ ವೃತ್ತಿಯ ಲಕ್ಷಣಗಳು. FEATURES OF BARBERING.
ಕ್ಷೌರಿಕ ವೃತ್ತಿಯು ಕೆಲವು ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಕ್ಷೌರಿಕ ವೃತ್ತಿಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.
01. ಪುರಾತನ ವೃತ್ತಿ:- Ancient Profession:- ಕೂದಲನ್ನು ಕತ್ತರಿಸುವುದು, ತೆಗೆಯುವುದು ಮತ್ತು ಶೃಂಗಾರ ಮಾಡುವುದು ಮಾನವ ಇತಿಹಾಸದಷ್ಟೇ ಹಳೆಯದು. ಕ್ಷೌರಿಕರ ಕೆಲಸವು ಶೀಲಾಯುಗದಲ್ಲಿ ಪ್ರಾರಂಭವಾಗಿ ಮತ್ತು ಬಹುತೇಕ ಎಲ್ಲಾ ಪ್ರಾಚೀನ ನಾಗರಿಕತೆಗಳಲ್ಲಿ ಅಸ್ತಿತ್ವದಲ್ಲಿದ್ದು ನಿರಂತರವಾಗಿ ಮುಂದುವರಿದುಕೊಂಡು ಬರುತ್ತಿದೆ. ಇದು ಒಂದು ಸಾರ್ವಕಾಲಿಕ ವೃತ್ತಿಯಾಗಿದೆ.
02. ಸರ್ವವ್ಯಾಪಿ :- Omnipresent :- ಮಾನವರು ವಾಸಿಸುತ್ತಿರುವ ಪ್ರಪಂಚದ ಯಾವುದೇ ಭಾಗದಲ್ಲಿ ಕ್ಷೌರ ಕುಟಿರಗಳು ಅಸ್ತಿತ್ವದಲ್ಲಿವೆ. ಕ್ಷೌರಿಕರನ್ನು ದೊಡ್ಡ ನಗರಗಳಿಂದ ಸಣ್ಣ ಹಳ್ಳಿಗಳವರೆಗೆ ಎಲ್ಲಾ ಕಡೆ ಕಾಣಬಹುದು. ಇಂದು ಇವರ ಸೇವೆಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಲಭ್ಯವಿವೆ. ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಕ್ಷೌರಿಕರ ಸೇವೆಗಳ ಅವಶ್ಯಕತೆ ಇದೆ.
03. ಸಾರ್ವತ್ರಿಕ :- Universal :- ಕ್ಷೌರಿಕರ ಮತ್ತು ಕೇಶವಿನ್ಯಾಸಕರ ಸೇವೆಗಳು ಎಲ್ಲರಿಗೂ ಅಗತ್ಯವಾಗಿವೆ. ಇವರ ಸೇವೆ ಜಾತಿ, ಧರ್ಮ, ಭಾಷೆ ಅಥವಾ ದೇಶಗಳ ಭೇದವಿಲ್ಲದೆ ಎಲ್ಲರಿಗೂ ಬೇಕಾಗಿವೆ. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಮತ್ತು ಇತರ ಧರ್ಮದವರು ತಮ್ಮದೇ ಆದ ಕೇಶಮಂಡನ ಹಾಗೂ ಕೇಶವಿನ್ಯಾಸದ ನಿಯಮಗಳನ್ನು ಮತ್ತು ಅಚಾರಗಳನ್ನು ಹೊಂದಿದ್ದಾರೆ.
04. ಕೂದಲಿಗೆ ಸಂಬಂಧಿಸಿದೆ :- Related to Hair :- ಕ್ಷೌರಿಕರ ಕೆಲಸವು ಮುಖ್ಯವಾಗಿ ಮಾನವ ಕೂದಲು ಮತ್ತು ಉಗುರುಗಳನ್ನು ತೆಗೆಯುವುದು, ಕತ್ತರಿಸುವುದು ಮತ್ತು ಶೃಂಗಾರ ಮಾಡುವ ಕೆಲಸಗಳಿಗೆ ಸಂಬಂಧಿಸಿದೆ. ಇತರೆ ಸಾಂದರ್ಭಿಕ ಸೇವೆಗಳನ್ನು ಇವರು ನೀಡುತ್ತರಾದರು ಇವರ ಸೇವೆ ಮುಖ್ಯವಾಗಿ ಕೂದಲಿಗೆ ಸಂಬಂಧಿಸಿರುತ್ತದೆ,
05. ಮುಖ ಅಥವಾ ತಲೆ ಕೂದಲಿಗೆ ಸಂಬಂಧಿಸಿದೆ :- Related to Facial and Head Hair :-ಕ್ಷೌರಿಕರು ತಲೆ ಮತ್ತು ಮುಖದಂತಹ ಮಾನವರ ಪ್ರಮುಖ ಭಾಗಗಳಿಂದ ಕೂದಲನ್ನು ಕತ್ತರಿಸಿ, ತೆಗೆದುಹಾಕಿ. ಮನುಷ್ಯರನ್ನು ಹೆಚ್ಚು ಸುಂದರವಾಗಿಸಲು ಅಗತ್ಯವಾದ ಕೂದಲ ಆಕಾರ ಮತ್ತು ಶೈಲಿಯನ್ನು ನೀಡುತ್ತಾರೆ.
06. ನಾಗರಿಕತೆಯ ಗುರುತು :- Symbol of Civilization :- ಕ್ಷೌರಿಕ ಮತ್ತು ಕೇಶವಿನ್ಯಾಸದ ಸೇವೆಗಳು ಇಲ್ಲದೆ ಜನರು ನಾಗರಿಕ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಒಬ್ಬ ವ್ಯಕ್ತಿಯ ಆರೋಗ್ಯ ಹಾಗೂ ಸೌಂದರ್ಯ ಕ್ಷೌರಿಕರ ಅಥವಾ ಕೇಶವಿನ್ಯಾಸಕರ ಸೇವೆಯಿಂದ ನಿರ್ಣಯವಾಗುತ್ತದೆ.
07. ಕ್ರಿಯಾತ್ಮಕ :- Functional :- ಕ್ಷೌರಿಕರ ಉದ್ಯೋಗ ಮತ್ತು ಸೇವೆಗಳು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಂಶಗಳ ಮೇಲೆ ನಿರ್ಣಯವಾಗುತ್ತವೆ. ಕೇಶವಿನ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಮತ್ತು ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಬದಲಾಗುತ್ತವೆ. ಆದ್ದರಿಂದ ಈ ವೃತ್ತಿಯು ಹೆಚ್ಚು ಕ್ರಿಯಾತ್ಮಕ ವೃತ್ತಿಯಾಗಿದೆ.
ಕ್ಷೌರಿಕ ವೃತ್ತಿಯ ಮಹತ್ವ. IMPORTANCE OF BARBERING.
ಮಾನವನ ದೇಹದಿಂದ ಅನಗತ್ಯ ಹಾಗೂ ತೊಂದರೆ ನೀಡುವ ಕೂದಲನ್ನು ಕತ್ತರಿಸಿ ತೆಗೆದುಹಾಕುವುದು ಬಹಳ ಮುಖ್ಯವಾದ ಹಾಗೂ ಅವಶ್ಯಕವಾದ ಕ್ರಿಯೆಯಾಗಿದೆ. ಕ್ಷೌರಿಕರ ವೃತ್ತಿಗೆ ಸಂಬಂಧಿಸಿದಂತೆ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕಾರಣಗಳಿವೆ. ಈ ವೃತ್ತಿಯು ಈ ಕೆಳಗಿನ ಕಾರಣಗಳಿಗಾಗಿ ಮುಖ್ಯವಾಗಿದೆ.
01. ದೀರ್ಘಕಾಲದವರೆಗೆ ಕತ್ತರಿಸದ ಕೂದಲುಗಳಲ್ಲಿ ಹೇನಿನಂತಹ ಪರಾವಲಂಬಿ ಕ್ರಿಮಿಗಳು ಸೇರುತ್ತವೆ. ತಲೆಹೊಟ್ಟು, ತುರಿಕೆ ಮುಂತಾದ ಸಮಸ್ಯೆಗಳನ್ನು ತರುತ್ತವೆ. ಆದ್ದರಿಂದ ಕ್ಷೌರಿಕರ ಸೇವೆಯನ್ನು ಪಡೆಯುವುದು ವ್ಯಕ್ತಿಗೆ ಅಗತ್ಯವಾಗಿದೆ.
02. ದೀರ್ಘಕಾಲದವರೆಗೆ ಕತ್ತರಿಸದ ಕೂದಲುಗಳು ಅನಾರೋಗ್ಯ ಮತ್ತು ಚರ್ಮದ ಕಾಯಿಲೆಯಂತಹ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದ್ದರಿಂದ ಮಾನವರ ಅನಗತ್ಯ ಕೂದಲನ್ನು ಕತ್ತರಿಸಿ ತೆಗೆದುಹಾಕಲು ಕ್ಷೌರಿಕರ ಸೇವೆ ಅನಿವಾರ್ಯವಾಗಿದೆ.
03. ದೀರ್ಘಕಾಲದವರೆಗೆ ಕತ್ತರಿಸದ ಮತ್ತು ನಿರ್ವಹಿಸದ ಕೂದಲನ್ನು ಹೊಂದಿರುವ ವ್ಯಕ್ತಿಯ ಮುಖವು ನೋಡಲು ಆಕರ್ಷಕವಾಗಿರುವುದಿಲ್ಲ. ಆದ್ದರಿಂದ ವ್ಯಕ್ತಿಯ ಸೌಂದರ್ಯ ಮತ್ತು ಸಾಮಾಜಿಕ ಒಪ್ಪಿಗೆಯನ್ನು ಪಡೆಯಲು ಕೂದಲನ್ನು ಕತ್ತರಿಸಿ ಶೃಂಗರಿಸಬೇಕಾಗುತ್ತದೆ.
04. ಒಬ್ಬ ವ್ಯಕ್ತಿಯು ತನ್ನ ಮುಖದ ಕೂದಲನ್ನು ತೆಗೆಯುವುದು ಹಾಗೂ ತನ್ನದೇ ಕೇಶಶೈಲಿಯನ್ನು ಹೊಂದಿರುವುದು ಅಗತ್ಯ. ಇಲ್ಲದೇ ಹೋದರೆ ಎಲ್ಲರೂ ಒಂದೇ ರೀತಿ ಕಾಣುವುದರಿಂದ ನಿರ್ದಿಷ್ಟ ವ್ಯಕ್ತಿಗಳನ್ನು ಗುರುತಿಸುವುದು ಕಷ್ಟವಾಗಬಹುದು. ಆದ್ದರಿಂದ ಕೇಶವಿನ್ಯಾಸವು ವ್ಯಕ್ತಿಯನ್ನು ಗುರುತಿಸಲು ಮತ್ತು ಇತರರಿಂದ ಪ್ರತ್ಯೇಕಿಸಲು ಅಗತ್ಯವಾಗಿದೆ.
05. ಮುಖವು ಮನಸ್ಸಿನ ಭಾವನೆಗಳ ಸೂಚ್ಯಂಕವಾಗಿದೆ. ಆದ್ದರಿಂದ ಸಂತೋಷ, ದುಃಖ, ಕೋಪ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸಿದಾಗ ಆ ಭಾವನೆಗಳು ಇತರೆಯವರಿಗೆ ತಿಳಿಯಲು ಮುಖದ ಮೇಲಿನ ಕೂದಲುಗಳನ್ನು ತೆಗೆದುಹಾಕುವುದು ಅಗತ್ಯವಾಗಿದೆ.
06. ಉಷ್ಣ ವಾತಾವರಣದಲ್ಲಿ ತಲೆ ಮತ್ತು ದೇಹದಲ್ಲಿ ಕಡಿಮೆ ಕೂದಲನ್ನು ಹೊಂದುವುದು ಸೂಕ್ತ ಆದೇ ರೀತಿ ಶೀತ ವಾತಾವರಣದಲ್ಲಿ ಹೆಚ್ಚು ಕೂದಲನ್ನು ದೇಹವು ಬಯಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕೂದಲನ್ನು ತೆಗೆಯುವುದು ಹಾಗೂ ನಿರ್ವಹಿಸುವುದು ಅವಶ್ಯಕ. ಕ್ಷೌರಿಕರ ಈ ಸೇವೆಯು ದೇಹದ ಕೂದಲನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
07. ಕೂದಲು ಕತ್ತರಿಸುವುದು ಅನೇಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಇದು ಧರ್ಮ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು, ನಂಬಿಕೆಗಳು, ಕಾನೂನುಗಳು, ಇತ್ಯಾದಿ ಅಂಶಗಳನ್ನು ಪರಿಗಣಿಸಿ ಕೇಶವಿನ್ಯಾಸಗಳನ್ನು ಬದಲಾಗುತ್ತವೆ. ಅಗತ್ಯ ಕೇಶವಿನ್ಯಾಸಗಳಿಗಾಗಿ ಕ್ಷೌರಿಕರ ಸೇವೆ ಬೇಕಾಗುತ್ತದೆ.
08. ಭದ್ರತೆ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಕಡಿಮೆ ಮತ್ತು ಸಣ್ಣ ಕೂದಲುಗಳ ಅವಶ್ಯಕತೆ ಇದೆ. ಹೆಚ್ಚು ಉದ್ದದ ಕೂದಲನ್ನು ಹೊಂದಿದ್ದರೆ ಶತ್ರುಗಳಿಗೆ ಕೊಲ್ಲಲು ಅಥವಾ ಚಿತ್ರಹಿಂಸೆ ನೀಡಲು ಅವಕಾಶ ದೊರೆಯುತ್ತದೆ. ಈ ಉದ್ದೇಶಕ್ಕೆ ಕೂದಲನ್ನು ತೆಗೆದುಹಾಕಲು ಕ್ಷೌರಿಕರ ಸೇವೆ ಬೇಕಾಗುತ್ತದೆ.
ಕ್ಷೌರಿಕರ ವಿಧಗಳು:- TYPES OF BARBERS.
ಕ್ಷೌರಿಕರನ್ನು ಅವರ ಸೇವಾ ಸ್ಥಳ ಮತ್ತು ಕ್ಷೌರಕುಟೀರದ ಗಾತ್ರದ ಮೇಲೆ ಈ ಕೆಳಗಿನಂತೆ ವರ್ಗೀಕರಿಸಬಹುದು:
01. ಅನಿಗದಿತ ಸ್ಥಳದ ಕ್ಷೌರಿಕರು. Itinerant Barbers.
02. ನಿಗದಿತ ಸ್ಥಳದ ಕ್ಷೌರಿಕರು. Fixed Place Barbers.
01. ಅನಿಗದಿತ ಸ್ಥಳದ ಕ್ಷೌರಿಕರು:- Itinerant Barbers:- ಯಾವುದೇ ಶಾಶ್ವತ ಸೇವೆಯ ಸ್ಥಳವಿಲ್ಲದೆ ಸೇವೆ ಸಲ್ಲಿಸುವ ಕ್ಷೌರಿಕರನ್ನು ಅನಿಗದಿತ ಸ್ಥಳದ ಕ್ಷೌರಿಕರು ಎಂದು ಕರೆಯಲಾಗುತ್ತದೆ. ಈ ಕ್ಷೌರಿಕರನ್ನು ಮೂರು ವಿಧವಾಗಿ ವರ್ಗೀಕರಿಸಬಹುದು:
1) ಸಂಚಾರಿ ಕ್ಷೌರಿಕರು. Travelling Barbers.
2) ವಿಶೇಷ ಪ್ರದೇಶ ಕ್ಷೌರಿಕರು. Special Place Barbers.
3) ಬೀದಿ ಬದಿಯ ಕ್ಷೌರಿಕರು. Street Barbers.
1) ಸಂಚಾರಿ ಕ್ಷೌರಿಕರು: - Travelling Barbers: -ಕ್ಷೌರಿಕರು ತನ್ನ ಉಪಕರಣಗಳ ಪೆಟ್ಟಿಗೆ (ಹಡಪ) ಅಥವಾ ಚೀಲದೊಂದಿಗೆ ತನ್ನ ಗ್ರಾಹಕರ ಮನೆಗಳಿಗೆ ನಿರ್ದಿಷ್ಟ ಸಮಯ ಮತ್ತು ದಿನಗಳಲ್ಲಿ ಅಥವಾ ತನ್ನ ಗ್ರಾಹಕರ ಕರೆಯ ಮೇರೆಗೆ ಹೋಗಿ ಕ್ಷೌರಿಕ ಸೇವೆಯನ್ನು ನೀಡುತ್ತಾರೆ. ಇವರನ್ನು ಸಂಚಾರಿ ಕ್ಷೌರಿಕರು ಎಂದು ಕರೆಯಲಾಗುತ್ತದೆ. ಇವರು ಈ ಸೇವೆಯ ಜೊತೆಗೆ ಕೆಲವೊಮ್ಮೆ ಇವರು ದೇಹಮರ್ದನ (ಮಸಾಜ್), ಉಗುರುಗಳನ್ನು ಕತ್ತರಿಸುವ, ಶಸ್ತ್ರಚಿಕಿತ್ಸೆ, ಔಷದೋಪಚಾರ, ಮುಂತಾದ ಸೇವೆಗಳನ್ನು ನೀಡುತ್ತಾರೆ. ಅವರ ಸೇವೆಯ ಪ್ರತಿಫಲವು ನಗದು ಅಥವಾ ವಸ್ತುಗಳರೂಪದಲ್ಲಿರುತ್ತದೆ. ಗ್ರಾಮೀಣ ಭಾಗದಲ್ಲಿ ಕೆಲವು ಕ್ಷೌರಿಕರು ತನ್ನ ಸಂಭಾವನೆಯನ್ನು ರೈತರಿಂದ ಬೆಳೆ ಬಂದಾಗ ಏಕಕಾಲದಲ್ಲಿ ಸಂಗ್ರಹಿಸುತ್ತಾರೆ. ಹಿಂದೆ ಈ ವ್ಯವಸ್ಥೆಯು ಹಳ್ಳಿಗಳಲ್ಲಿ ಬಹಳ ಜನಪ್ರಿಯವಾಗಿತ್ತು. ಈ "ಆಯಾ" ಪದ್ದತಿಯು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿದೆ.
2) ವಿಶೇಷ ಪ್ರದೇಶ ಕ್ಷೌರಿಕರು: - Special Place Barbers: -ಇವರು ಯಾವುದೇ ಕಟ್ಟಡದ ಆಶ್ರಯವಿಲ್ಲದೆ ಸಾಂದರ್ಭಿಕ ಸೇವೆಯನ್ನು ಒದಗಿಸುತ್ತಾರೆ. ಅವರು ಸಂತೆಗಳು, ಜಾತ್ರೆಗಳು, ದೇವಾಲಯಗಳ ಸ್ಥಳಗಳು, ಅಥವಾ ನದಿಗಳ ದಡದಲ್ಲಿ ಸೇವೆ ಸಲ್ಲಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾರ್ಮಿಕ, ಸಾಂಸ್ಕೃತಿಕ ಅಥವಾ ಇತರೆ ಉದ್ದೇಶಗಳಿಗಾಗಿ ಸೇರಿದಾಗ ಅಲ್ಲಿ ಈ ಸೇವೆಯನ್ನು ಒದಗಿಸುತ್ತಾರೆ.
3) ಬೀದಿ ಬದಿಯ ಕ್ಷೌರಿಕರು: - Street Barbers: - ಇವರು ಜನದಟ್ಟಣೆ ಇರುವ ಬೀದಿಗಳಲ್ಲಿ, ಬಸ್ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣಗಳ ಹತ್ತಿರ ಅಥವಾ ಮರಗಳ ನೆರಳಿನಲ್ಲಿ ಅಥವಾ ವಸತಿ ಪ್ರದೇಶಗಳ ಪಕ್ಕದಲ್ಲಿ ಯಾವುದೇ ಕಟ್ಟಡದ ಆಶ್ರಯವಿಲ್ಲದೆ ನಿಯಮಿತ ಸೇವೆಯನ್ನು ಒದಗಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಕ್ಷೌರದ ಅಂಗಡಿಗಳು ಪ್ರಾರಂಭವಾಗಿ ಇಂತಹ ರಸ್ತೆ ಬದಿಯ ಕ್ಷೌರಿಕರ ಸಂಖೆ ಗಣನೀಯವಾಗಿ ಕಡಿಮೆಯಾಗಿದೆ.
02. ಸ್ಥಿರ ಸ್ಥಳದ ಕ್ಷೌರಿಕರು:- Fixed Place Barbers:-ಕ್ಷೌರಿಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚಾರಿಸುವ ಬದಲು, ಶಾಶ್ವತವಾಗಿ ಅಂಗಡಿಗಳನ್ನು ಸ್ಥಾಪಿಸಿ ಸೇವೆಯನ್ನು ಒದಗಿಸುತ್ತಾರೆ. ಇವರನ್ನು ಸ್ಥಿರ ಸ್ಥಳದ ಕ್ಷೌರಿಕರು ಎಂದು ಕರೆಯಲಾಗುತ್ತಾರೆ.ಇಂದಿನ ದಿನಗಳಲ್ಲಿ ಇವು ತುಂಬಾ ಸಾಮಾನ್ಯವಾಗಿವೆ. ಈ ಸ್ಥಿರ ಸ್ಥಳದ ಕ್ಷೌರಿಕರನ್ನು ಕೆಳಗಿನಂತೆ ವರ್ಗೀಕರಿಸಬಹುದು.
1) ಸಣ್ಣ ಅಂಗಡಿ ಕ್ಷೌರಿಕರು. Small Shop Barbers.
2) ದೊಡ್ಡ ಅಂಗಡಿ ಕ್ಷೌರಿಕರು. Big Shop Barbers.
3) ದೇವಾಲಯದ ಕ್ಷೌರಿಕರು. Temple Barbers.
1) ಸಣ್ಣ ಅಂಗಡಿ ಕ್ಷೌರಿಕರು: - Small Shop Barbers: - ಈ ಕ್ಷೌರಿಕರು ಸಣ್ಣ ಅಂಗಡಿಯ ಮಾಲೀಕರಾಗಿದ್ದು, ಅವರು ಒಂದು ಅಥವಾ ಎರಡು ಸೇವಾ ಕುರ್ಚಿಗಳನ್ನು ಹೊಂದಿರುತ್ತಾರೆ, ಅದನ್ನು ಅವರು ಸ್ವತಃ ಅಥವಾ ಅವರ ಕುಟುಂಬ ಸದಸ್ಯರ ಬೆಂಬಲದೊಂದಿಗೆ ನಿರ್ವಹಿಸುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಅವರು ಒಬ್ಬ ಅಥವಾ ಕೆಲವು ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ.
2) ದೊಡ್ಡ ಅಂಗಡಿ ಕ್ಷೌರಿಕರು: - Big Shop Barbers: - ದೊಡ್ಡ ಕ್ಷೌರಿಕ ಅಂಗಡಿಗಳನ್ನು ಶ್ರೀಮಂತ ಕ್ಷೌರಿಕರು ಅಥವಾ ಇತರ ಉದ್ಯಮಿಗಳು ದೊಡ್ಡ ಅಂಗಡಿಗಳನ್ನು ಪ್ರಾರಂಭಿಸಿ ಸೇವೆ ನೀಡುತ್ತಿರುತ್ತಾರೆ. ಈ ಅಂಗಡಿಗಳು ಸಾಮಾನ್ಯವಾಗಿ ವಾಣಿಜ್ಯ ಪ್ರದೇಶಗಳಲ್ಲಿರುತ್ತವೆ. ಈ ಅಂಗಡಿಗಳು ಹೆಚ್ಚಿನ ಕೆಲಸಗಾರರನ್ನು ಹೊಂದಿ, ಹೆಚ್ಚು ಬಂಡವಾಳವನ್ನು ಹೂಡಿಕೆ ಮಾಡಿ, ಅಬ್ಬರದ ಪ್ರಚಾರ, ಅಲಂಕಾರ ಹಾಗೂ ಉತ್ತಮವಾಗಿ ಯೋಜಿತ ಸೌಲಬ್ಯಗಳೊಂದಿಗೆ ಸೇವೆ ನೀಡುತ್ತಿರುತ್ತವೆ. ಇತ್ತಿಚಿನ ದಿನಗಳಲ್ಲಿ ಕೆಲವು ಶ್ರೀಮಂತರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಇಂತಹ ಅಂಗಡಿಗಳನ್ನು ತೆರೆಯುತಿದ್ದಾರೆ. ಹಲವರು ಕ್ಷೌರ ದೊಡ್ಡ ಉದ್ಯಮಿಗಳು ಆದಾಯ ಹಂಚಿಕೆ ಯೋಜನೆಯ ಫ್ರಾಂಚೈಸಿಯ ಸೇವೆಗಳನ್ನು ಒದಗಿಸುತ್ತಿದ್ದಾರೆ.
3) ದೇವಾಲಯದ ಕ್ಷೌರಿಕರು: - Temple Barbers: - ಕೆಲವು ಕ್ಷೌರಿಕರು ದೇವಾಲಯಗಳಲ್ಲಿ ಕ್ಷೌರಿಕ ಸೇವೆ ಮಾಡುತ್ತಾರೆ. ದೊಡ್ಡ ದೇವಾಲಯಗಳಲ್ಲಿ ದೇವರಿಗೆ ತಮ್ಮ ಕೂದಲನ್ನು ಅರ್ಪಿಸಲು ಭಕ್ತರಿಗೆ ನಿರ್ದಿಷ್ಟ ಸ್ಥಳವನ್ನು ನಿಗದಿ ಪಡಿಸಿರುತ್ತಾರೆ. ಆ ಸ್ಥಳದಲ್ಲಿ ಕ್ಷೌರಿಕರು ತಮ್ಮ ಸೇವೆಯನ್ನು ನೀಡುತ್ತಿರುತ್ತಾರೆ. ದೇವಾಲಯದ ಆಡಳಿತವು ಈ ಕ್ಷೌರಿಕರನ್ನು ಸಂಬಳ ಅಥವಾ ಕಮಿಷನ್ ಆಧಾರದ ಮೇಲೆ ನೇಮಿಸೀರುತ್ತದೆ. ಕೆಲವು ದೇವಾಲಯಗಳಲ್ಲಿ ಕ್ಷೌರಿಕರ ಸಂಘಟನೆಗಳು ದೇವಾಲಯ ಆಡಳಿತದ ಒಪ್ಪಂದದೊಂದಿಗೆ ಈ ಸೇವೆಗಳನ್ನು ನಿರ್ವಹಿಸುತ್ತವೆ. ದೇವಾಲಯದ ಆಡಳಿತಗಳು ಮುಕ್ತವಾಗಿ ಅಥವಾ ಪ್ರತಿಫಲದ ಒಪ್ಪಂದದ ಮೇಲೆ ಅನುಮತಿಸಿರುತ್ತವೆ.
ಹಕ್ಕುಗಳು ಮತ್ತು ಕರ್ತವ್ಯಗಳು:- RIGHTS AND DUTIES.
ಕ್ಷೌರಿಕರ ಹಕ್ಕುಗಳು:- RIGHTS OF BARBERS.
01.ಉಪಕರಣಗಳ ಬಳಕೆಯ ಹಕ್ಕು:-Right to Use Tools:- ಸಂಭವನೀಯ ಅಪಾಯಗಳನ್ನು ತಿಳಿಸುವ ಮೂಲಕ ಗ್ರಾಹಕರ ತಲೆ ಮತ್ತು ಮುಖದ ಮೇಲೆ ತಮ್ಮ ಸೇವೆಗೆ ಅಗತ್ಯವಾದ ಕತ್ತಿ, ಕತ್ತರಿ, ಬಾಚಣಿಕೆ, ವಿದ್ಯುತ್ ಉಪಕರಣಗಳು, ಸೌಂದರ್ಯ ಸಾಧನಗಳು, ಇತರೆ ಅಗತ್ಯ ಪರಿಕರಗಳನ್ನು ಬಳಸುವ ಹಕ್ಕನ್ನು ಕ್ಷೌರಿಕರು ಹೊಂದಿರುತ್ತಾರೆ.
02. ವೃತ್ತಿ ಗೌರವ ನಿರೀಕ್ಷಿಸುವ ಹಕ್ಕು:- Right to Expect Respect :- ಎಲ್ಲಾ ವೃತ್ತಿಗಳಿಗೆ ತನ್ನದೇ ಆದ ಗೌರವ ಇರುತ್ತದೆ. ಗ್ರಾಹಕರು ಕ್ಷೌರಿಕರಿಂದ ಅವರ ಘನತೆ ಮತ್ತು ಸ್ವಾಭಿಮಾನಕ್ಕೆ ಹಾನಿಯಾಗದಂತೆ ಸೇವೆ ಪಡೆಯಬೇಕು. ಅಂದರೆ ಗ್ರಾಹಕರು ಕ್ಷೌರಿಕರೊಂದಿಗೆ ಗೌರವದಿಂದ ವರ್ತಿಸಬೇಕು. ಕ್ಷೌರಿಕರು ತನ್ನ ವೃತ್ತಿಗೆ ಹಾಗೂ ತನಗೆ ಯೋಗ್ಯ ಗೌರವವನ್ನು ನಿರೀಕ್ಷಿಸುವ ಹಕ್ಕನ್ನು ಯಾವಾಗಲೂ ಹೊಂದಿರುತ್ತಾರೆ.
03. ಯೋಗ್ಯ ಸಂಭಾವನೆ ಪಡೆಯುವ ಹಕ್ಕು:- Right for Remuneration :- ಒಪ್ಪಂದದ ಕಾನೂನಿನ ಪ್ರಕಾರ ಯಾವುದೇ ಕಾರ್ಯಕ್ಕೆ ಪ್ರತಿಫಲ ನೀಡಿದರೆ ಮಾತ್ರ ಅದು ಕಾನೂನಿನ ಪ್ರಕಾರ ಒಪ್ಪಂದವಾಗುತ್ತದೆ. ಕ್ಷೌರಿಕರು ತಾವು ಒದಗಿಸುವ ಅಮೂಲ್ಯ ಸೇವೆಗೆ ಯೋಗ್ಯ ಪ್ರತಿಪಲವನ್ನು ನಿರೀಕ್ಷಿಸಬೇಕಾಗುತ್ತದೆ. ಆದ್ದರಿಂದ ಕ್ಷೌರಿಕರಿಗೆ ತನ್ನ ಸೇವೆಗೆ ಸರಿಯಾದ ಸಂಭಾವನೆಯನ್ನು ಪಡೆಯುವ ಹಕ್ಕು ಇರುತ್ತದೆ.
04. ಮಾಹಿತಿಯ ಪಡೆಯುವ ಹಕ್ಕು:- Right of Asking Information :- ಕ್ಷೌರಿಕರು ತಮ್ಮ ಗ್ರಾಹಕರು ನೀಡುವ ಸೂಚನೆಗಳ ಪ್ರಕಾರ ಸೇವೆಗಳನ್ನು ನೀಡಬೇಕಾಗುತ್ತದೆ. ಆದ್ದರಿಂದ ಕ್ಷೌರಿಕರಿಗೆ ಗ್ರಾಹಕರಿಂದ ತನ್ನ ಸೇವೆಯನ್ನು ನೀಡಲು ಅಗತ್ಯವಾದ ಮಾಹಿತಿಯನ್ನು ಕೇಳುವ ಮತ್ತು ಪಡೆಯುವ ಹಕ್ಕು ಇರುತ್ತದೆ.
05. ಸೇವೆಯನ್ನು ನಿರಾಕರಿಸುವ ಹಕ್ಕು :- Right to Reject Service :- ಗ್ರಾಹಕನು ಸಾಂಕ್ರಾಮಿಕ ರೋಗ ಮತ್ತು ಅತ್ಯಂತ ಅನೈರ್ಮಲ್ಯದ ಸ್ಥಿತಿಯನ್ನು ಹೊಂದಿದ್ದರೆ ಹಾಗೂ ದುರ್ವರ್ತನೆ ತೋರಿದರೆ ಅಂತಹ ಸಂದರ್ಭಗಳಲ್ಲಿ ಕ್ಷೌರಿಕರು ತಮ್ಮ ಸೇವೆಗಳನ್ನು ನಿರಾಕರಿಸುವ ಹಕ್ಕನ್ನು ಹೊಂದಿರುತ್ತಾರೆ.
ಕ್ಷೌರಿಕರ ಕರ್ತವ್ಯಗಳು. DUTIES OF BARBERS.
01. ತಾರತಮ್ಯವಿಲ್ಲದ ಸೇವೆ ನೀಡುವ ಕರ್ತವ್ಯ :- Duty of Indiscrimination :- ಕ್ಷೌರಿಕರು ಅಥವಾ ಕೇಶವಿನ್ಯಾಸಕರು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ತಮ್ಮ ಸೇವೆಯನ್ನು ಒದಗಿಸುವ ಕರ್ತವ್ಯ ಹೊಂದಿದ್ದಾರೆ. ಕ್ಷೌರಿಕರು ತಮ್ಮ ಸೇವೆ ನೀಡುವಾಗ ಗ್ರಾಹಕರಿಗೆ ಜಾತಿ, ಧರ್ಮ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ತೋರಿಸಬಾರದು.
02. ವೃತ್ತಿ ಸಂಘಟನೆಗಳ ನಿಯಮಗಳ ಪಾಲನೆಯ ಕರ್ತವ್ಯ:- Duty of Obeying Rules of Professional Body :- ಕೆಲವು ಪ್ರದೇಶಗಳಲ್ಲಿ ಕ್ಷೌರಿಕರು ಹಾಗೂ ಕೇಶವಿನ್ಯಾಸಕರು ತಮ್ಮ ಹಿತರಕ್ಷಣೆಗಾಗಿ ವೃತ್ತಿಪರ ಅಥವಾ ಸಮುದಾಯ ಸಂಘಗಳನ್ನು ಹೊಂದಿರುತ್ತಾರೆ. ವೃತ್ತಿನಿರತರು ಅಂತಹ ಸಂಘಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ವೃತ್ತಿ ಮತ್ತು ವೃತ್ತಿದಾರರ ಹಿತದೃಷ್ಟಿಯಿಂದ ರಚಿಸಿದ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಒಪ್ಪಿ ಅವುಗಳನ್ನು ಅನುಸರಿಸಬೇಕು.
03. ಆರೈಕೆ ಮತ್ತು ಸೌಕರ್ಯದ ಕರ್ತವ್ಯ:- Duty of Care and Comfort:- ಕ್ಷೌರಿಕರು ಹರಿತವಾದ ಕ್ಷೌರಕತ್ತಿ (ರೇಜರ್), ಕತ್ತರಿ, ವಿದ್ಯುತ್ ಉಪಕರಣಗಳು ಇತ್ಯಾದಿಗಳೊಂದಿಗೆ ತನ್ನ ಸೇವೆಯನ್ನು ಒದಗಿಸಬೇಕಾಗಿರುತ್ತದೆ. ಅವರು ತನ್ನ ಸೇವೆಯನ್ನು ನೀಡುವಾಗ ಗ್ರಾಹಕರ ದೇಹಕ್ಕೆ ಹಾಗೂ ಸೌಂದರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಸೇವೆಯನ್ನು ಒದಗಿಸಬೇಕು.
04. ಗ್ರಾಹಕರ ಸೌಂದರ್ಯವನ್ನು ಸುಧಾರಿಸುವ ಕರ್ತವ್ಯ :-Duty of Enhancing Beauty :- ಕ್ಷೌರಿಕರ ಸೇವೆಯ ಉದ್ದೇಶವೇ ಗ್ರಾಹಕರ ಸೌಂದರ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುವುದು. ಆದ್ದರಿಂದ ಕ್ಷೌರಿಕರು ನೀಡುವ ಸೇವೆಯು ಗ್ರಾಹಕರ ಸೌಂದರ್ಯವನ್ನು ಹೆಚ್ಚಿಸುವಂತೆ ಇರಬೇಕೇ ವಿನಃ ಸೌಂದರ್ಯವನ್ನು ಹಾಳುಮಾಡುವಂತೆ ಇರಬಾರದು.
05. ನೂತನ ಕೌಶಲ್ಯಗಳನ್ನು ಕಲಿತು ಬಳಸುವ ಕರ್ತವ್ಯ:- Duty of Updating With Changes:- ಬದಲಾವಣೆ ಜಗದ ನಿಯಮ. ಗ್ರಾಹಕರ ಅಪೇಕ್ಷೆಗಳು,ವಿನ್ಯಾಸಗಳು ಕಾಲ ಕಳೆದಂತೆ ಬದಲಾಗುತ್ತಿರುತ್ತವೆ. ಕ್ಷೌರಿಕರು ತನ್ನ ಗ್ರಾಹಕರ ಬದಲಾದ ಅವಶ್ಯಕತೆಗಳನ್ನು ಪೂರೈಸಲು ಹೊಸ ಕೌಶಲ್ಯ ಮತ್ತು ತಂತ್ರಗಳನ್ನು ಕಲಿತು ಗ್ರಾಹಕರಿಗೆ ನೀಡಲು ಪ್ರಯತ್ನಿಸಬೇಕಾಗುತ್ತದೆ. ಗ್ರಾಹಕರ ನಿರೀಕ್ಷೆಗಳು ಮಾರುಕಟ್ಟೆಯಲ್ಲಿನ ಬದಲಾವಣೆಗಳೊಂದಿಗೆ ಕ್ಷೌರಿಕರು ನೀಡುವ ಸೇವೆಗಳ ಗುಣಮಟ್ಟವೂ ಉತ್ತಮಗೊಳ್ಳುತ್ತಿರಬೇಕು.
06. ಸ್ವಚ್ಛ ಪರಿಸರ ನಿರ್ವಹಿಸುವ ಕರ್ತವ್ಯ:-Duty of Clean Environment:- ಶುಚಿತ್ವಕ್ಕೆ ದೈವತ್ವದ ನಂತರದ ಸ್ಥಾನ ನೀಡಲಾಗುತ್ತದೆ. ಆದ್ದರಿಂದ ಗ್ರಾಹಕರ ಮತ್ತು ತಮ್ಮ ಹಿತದೃಷ್ಟಿಯಿಂದ ಕ್ಷೌರ ಕುಟೀರ ಹಾಗೂ ಅದರ ಸುತ್ತಲ ಪ್ರದೇಶದಲ್ಲಿ ಸ್ವಚ್ಛ ಮತ್ತು ನೈರ್ಮಲ್ಯದ ಪರಿಸರವನ್ನು ನಿರ್ವಹಿಸುವುದು ಕ್ಷೌರಿಕರ ಜವಾಬ್ದಾರಿಯಾಗಿದೆ.
07. ಗೌಪತೆಯ ಕರ್ತವ್ಯ :-Duty of Secrecy :- ಕ್ಷೌರಿಕರು ತಮ್ಮ ಗ್ರಾಹಕರ ವ್ಯಯಕ್ತಿಕ ವಿಚಾರಗಳನ್ನು ಬೇರೆಯವರಿಗೆ ತಿಳಿಸದೆ ಗೌಪತೆಯನ್ನು ಕಾಪಾಡುವ ಕರ್ತವ್ಯವನ್ನು ಹೊಂದಿರುತ್ತಾರೆ.
ಕ್ಷೌರಿಕ ವೃತ್ತಿಯ ಅನುಕೂಲಗಳು. MERITS OF BARBERING.
ಕ್ಷೌರಿಕ ವೃತಿಯ ಪ್ರಮುಖ ಅನುಕೂಲಗಳು ಈ ಕೆಳಗಿನಂತಿವೆ.
01. ಸ್ವಯಂ ಉದ್ಯೋಗ :- Self-Employment :- ಸಾಮಾನ್ಯವಾಗಿ ಕ್ಷೌರಿಕರು ತಮಗೆ ತಾವೇ ಒಡೆಯರು. ತಮಗಾಗಿ ಕೆಲಸ ಮಾಡಲು ಅಥವಾ ಯಶಸ್ವಿ ಉದ್ಯಮಗಳನ್ನು ತೆರೆಯಲು ಅವಕಾಶಗಳನ್ನು ನೀಡುವ ಇಂದಿನ ಕೆಲವು ವೃತ್ತಿಗಳಲ್ಲಿ ಕ್ಷೌರಿಕ ವೃತ್ತಿಯೂ ಒಂದು. ಈ ವೃತ್ತಿಯಲ್ಲಿ ವ್ಯಕ್ತಿಯು ಸ್ವತಂತ್ರವಾಗಿ ಗಳಿಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಇತರೆಯವರ ಅಂಗಡಿಗಳಲ್ಲಿ ಕಮಿಷನ್ ಅಥವಾ ಸಂಬಳದ ಆಧಾರದ ಮೇಲೆ ಕೆಲಸ ಮಾಡಬಹುದು ಅಥವಾ ಸ್ವಂತವಾಗಿ ಕ್ಷೌರ ಕುಟೀರವನ್ನು ಪ್ರಾರಂಭಮಾಡಿ ಸೇವೆಯನ್ನು ನೀಡಬಹುದು. ಸಾಮಾನ್ಯವಾಗಿ ಈ ವೃತ್ತಿಯಲ್ಲಿ ಜೀವನ ನಿರ್ವಹಣೆಗೆ ತೊಂದರೆ ಇರುವುದಿಲ್ಲ.
02. ಹೆಚ್ಚು ಸೃಜನಶೀಲ :- More Creativity :- ಕೇಶವಿನ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಮಯದಿಂದ ಸಮಯಕ್ಕೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತಿರುತ್ತವೆ. ಕೆಲವು ವೇಳೆ ಒಬ್ಬ ವ್ಯಕ್ತಿಯೇ ತನ್ನ ಕೇಶವಿನ್ಯಾಸವನ್ನು ಕಾಲಕಾಲಕ್ಕೆ ಬದಲಾಯಿಸುತ್ತಿರುತ್ತಾನೆ. ಕ್ಷೌರಿಕರು ವಿಭಿನ್ನ ಸಮಯಗಳಲ್ಲಿ ವಿಭಿನ್ನ ಶೈಲಿಗಳಲ್ಲಿ ಕೇಶವಿನ್ಯಾಸ ಮಾಡಬೇಕಾಗುತ್ತದೆ. ಇದು ಕ್ಷೌರಿಕರನ್ನು ಹೆಚ್ಚು ಸೃಜನಶೀಲವಾಗಿಸುತ್ತದೆ. ಕ್ಷೌರಿಕರು ವಿಭಿನ್ನ ಕೇಶವಿನ್ಯಾಸವನ್ನು ಹಾಗೂ ತಂತ್ರಗಳನ್ನು ಕಲಿತು ಬಳಸಬೇಕಾಗುತ್ತದೆ. ಇದು ಕ್ಷೌರಿಕರು ತಮ್ಮ ಕಲಾತ್ಮಕ ಕೌಶಲ್ಯಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಇತರ ಉದ್ಯೋಗಗಳಿಗೆ ಹೋಲಿಸಿದರೆ ಕ್ಷೌರಿಕರ ವೃತ್ತಿಯು ಹೆಚ್ಚು ಸೃಜನಶೀಲವಾಗಿರುತ್ತದೆ.
03. ಹೆಚ್ಚು ಸಾಮಾಜಿಕ ಸಂವಹನ :- More Social Contact :- ಪ್ರಾಚೀನ ಕಾಲದಿಂದಲೂ ಕ್ಷೌರಿಕರ ಅಂಗಡಿಗಳು ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಷಯಗಳ ಚರ್ಚೆ ನಡೆಸುವ ಸ್ಥಳವಾಗಿವೆ. ಜನರು ಇಲ್ಲಿಗೆ ಬಂದು ಇತರ ಗ್ರಾಹಕರ ಜೊತೆಗೆ ಮತ್ತು ಕ್ಷೌರಿಕರ ಜೊತೆಗೆ ಖಾಸಗಿ, ಸ್ಥಳೀಯ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುವುದು, ಚರ್ಚಿಸುವುದು ಸಾಮಾನ್ಯ. ಇದರಿಂದ ಕ್ಷೌರಿಕರ ಅಂಗಡಿಯು ವಿವಿಧ ಜನರನ್ನು ಭೇಟಿ ಮಾಡಲು ಮತ್ತು ಸಂವಹನ ಮಾಡಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.ಕೆಲವು ಸಂದರ್ಭಗಳಲ್ಲಿ ಇಲ್ಲಿ ಗಾಳಿಮಾತುಗಳು ಪ್ರಸಾರವಾಗುತ್ತವೆ. ಸಾಮಾನ್ಯವಾಗಿ ಕ್ಷೌರಿಕರು ತಮ್ಮ ಗ್ರಾಹಕರೊಂದಿಗೆ ಉತ್ತಮ ಸ್ನೇಹಿತರಾಗಿ ಉತ್ತಮ ಸಂಪರ್ಕವನ್ನು ಉಳಿಸಿಕೊಳ್ಳುತ್ತಾರೆ. ಈ ಮೂಲಕ ಕ್ಷೌರಿಕರ ಅಂಗಡಿಗಳು ಮಾಹಿತಿ ಮತ್ತು ಜ್ಞಾನವನ್ನು ಹಂಚುವ ಸ್ಥಳವಾಗಿವೆ. ಅದ್ದರಿಂದ ಕ್ಷೌರಿಕರ ಅಂಗಡಿಗಳು ಯುವಕರಿಗೆ ಹಾಗೂ ಹಿರಿಯರಿಗೆ ಪ್ರಿಯವಾದ ಸ್ಥಳವಾಗಿರುತ್ತವೆ
04. ಯಾವುದೇ ಭೌಗೋಳಿಕ ನಿರ್ಬಂಧಗಳಿಲ್ಲ :- No Geographical Restriction :- ಇಂದು ಸೌಂದರ್ಯವಾಗಿ ಮತ್ತು ಉತ್ತಮವಾಗಿ ಕಾಣಲು ಸಾಮಾನ್ಯವಾಗಿ ಎಲ್ಲರೂ ಅಪೇಕ್ಷಿಸುತ್ತಾರೆ. ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣಲು ಅವಶ್ಯಕವಾದ ಕೇಶವಿನ್ಯಾಸವನ್ನು ಹೊಂದಲು ಕ್ಷೌರಿಕರ ಸೇವೆಯು ಎಲ್ಲರಿಗೂ ಅಗತ್ಯವಾಗಿದೆ. ಕ್ಷೌರಿಕರ ಬೇಡಿಕೆಯು ಭೌಗೋಳಿಕವಾಗಿ ಯಾವುದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇವರ ಸೇವೆಯ ಅಗತ್ಯವು ಪ್ರಪಂಚದ ಎಲ್ಲಾ ಭಾಗಗಳಿಗೆ ಅವಶ್ಯವಾಗಿದೆ. ಈ ಅವಶ್ಯಕತೆಯು ಕ್ಷೌರಿಕರಿಗೆ ತಾವು ಯಾವುದೇ ಸ್ಥಳಕ್ಕೆ ಹೋಗಿ ಸೇವೆ ಸಲ್ಲಿಸುವ ಅವಕಾಶವನ್ನು ಒದಗಿಸುತ್ತದೆ. ಕ್ಷೌರಿಕರು ಯಾವುದೇ ಪ್ರದೇಶದಲ್ಲಿ ತಮ್ಮ ಸೇವೆಗಳನ್ನು ಒದಗಿಸುವ ಮೂಲಕ ತಮ್ಮ ಜೀವನವನ್ನು ನಡೆಸಬಹುದಾಗಿದೆ.
05. ಕ್ರಿಯಾಶೀಲವಾದ ವೃತ್ತಿ :- More Active Profession :- ಬದಲಾವಣೆಯು ಜಗದ ನಿಯಮವಾಗಿದೆ. ಪ್ರತಿದಿನವೂ ಸೌಂದರ್ಯ, ಶೈಲಿ ಮತ್ತು ಕೇಶವಿನ್ಯಾಸದ ಪರಿಕಲ್ಪನೆಗಳು ಬದಲಾಗುತ್ತಿರುತ್ತವೆ. ಕ್ಷೌರಿಕರ ಕುರ್ಚಿಯಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬ ಗ್ರಾಹಕನು ವಿವಿಧ ಸಂದರ್ಭಗಳಲ್ಲಿ ವಿಭಿನ್ನ ರೀತಿಯ ಶೈಲಿಗಳನ್ನು ಕೇಳುತ್ತಾರೆ. ಕ್ಷೌರಿಕರು ಪ್ರತಿದಿನ ವಿವಿಧ ವೃತ್ತಿ ಸಂಬಂಧಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕ್ಷೌರಿಕರ ಕೆಲಸವು ಹೆಚ್ಚು ಕ್ರಿಯಾತ್ಮಕವಾಗಿದೆ. ಈ ವೃತ್ತಿಯ ಕ್ಷೌರಿಕರಿಗೆ ಏಕತಾನತೆಯ ಬೇಸರವನ್ನು ದೂರಮಾಡಿ ಹೆಚ್ಚು ಆನಂದವನ್ನು ಮತ್ತು ಉತ್ತೇಜನವನ್ನು ನೀಡುತ್ತದೆ.
06. ಉತ್ತಮ ಆದಾಯ :- More Income :- ಇತ್ತೀಚಿನ ದಿನಗಳಲ್ಲಿ ಸಿನಿಮಾ, ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತರಾದ ಜನರು ತಾವು ಸುಂದರವಾಗಿ ಕಾಣಲು ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡಲು ಸಿದ್ಧರಾಗಿರುತ್ತಾರೆ. ದಿನದಿಂದ ದಿನಕ್ಕೆ ಕ್ಷೌರಿಕರ ಹಾಗೂ ಕೇಶವಿನ್ಯಾಸಕರ ಗಳಿಕೆಯು ಹೆಚ್ಚುವ ಸಾದ್ಯತೆ ಇದೆ, ಆದ್ದರಿಂದ ಅನುಭವ ಹಾಗೂ ಕೌಶಲ್ಯವನ್ನು ಕರಗತ ಮಾಡಿಕೊಂಡ ಕ್ಷೌರಿಕರಿಗೆ ಉತ್ತಮ ಗಳಿಕೆಯನ್ನು ಮಾಡಿ ಒಳ್ಳೆಯ ಜೀವನವನ್ನು ನಡೆಸಲು ವಿಪುಲ ಅವಕಾಶಗಳಿವೆ.
07.ಜನಪ್ರಿಯತೆ: -Popularity: -ಜಾತಿ, ಧರ್ಮ, ಸ್ಥಾನ ಇತ್ಯಾದಿಗಳ ಭೇದವಿಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ ಕ್ಷೌರಿಕರ ಸೇವೆ ಅವಶ್ಯಕವಾಗಿ ಬೇಕಾಗಿದೆ. ಎಲ್ಲಾ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನಾಯಕರಿಗೂ ಹಾಗೂ ಸಾಮಾನ್ಯರಿಗೂ ಕ್ಷೌರಿಕರ ಸೇವೆ ಬೇಕು. ಅದ್ದರಿಂದ ಕ್ಷೌರಿಕರು ಹೆಚ್ಚು ಜನರ ಪರಿಚಯವನ್ನು ಹೊಂದಿರುತ್ತಾರೆ. ಈ ಅಂಶವು ಕ್ಷೌರಿಕರ ಅಗತ್ಯತೆ ಹಾಗೂ ಗೌರವವನ್ನು ಹೆಚ್ಚಿಸುತ್ತವೆ. ಇದು ಕ್ಷೌರಿಕರನ್ನು ಸಾಮಾನ್ಯರ ಜೊತೆಗೆ ಜನಪ್ರಿಯ ವ್ಯಕ್ತಿಗಳು ಮತ್ತು ನಾಯಕರೊಂದಿಗೆ ಸಂಪರ್ಕಿಸುವ ಅವಕಾಶ ಒದಗಿಸುತ್ತದೆ.
08. ತರಬೇತಿ ಸುಲಭ :- Easy Training :- ಭಾರತದಲ್ಲಿ ತಜ್ಞ ಕ್ಷೌರಿಕರಿಗೆ ವಿಶೇಷ ಶಿಕ್ಷಣ ಹಾಗೂ ತರಬೇತಿ ನೀಡಲು ಹೆಚ್ಚಿನ ಸಂಸ್ಥೆಗಳಿಲ್ಲ. ಸಾಮಾನ್ಯವಾಗಿ ಅವರ ತರಬೇತಿಯು ಬಾಲ್ಯದಲ್ಲಿಯೇ ತಮ್ಮ ಹಿರಿಯರಿಗೆ ಸಹಾಯ ಮಾಡುವ ಮೂಲಕ ಕುಟುಂಬದ ಅಂಗಡಿಗಳಲ್ಲಿ ಪ್ರಾರಂಭವಾಗುತ್ತದೆ. ಅನುಕರಣೆ ಹಾಗೂ ಮಾರ್ಗದರ್ಶನದಿಂದ ಅಲ್ಪಾವಧಿಯಲ್ಲಿಯೇ ಕ್ಷೌರಿಕ ಕೌಶಲ್ಯಗಳನ್ನು ಕಲಿತು ಈ ವೃತ್ತಿಗೆ ಪ್ರವೇಶಿಸಬಹುದು. ಇವರು ವೃತ್ತಿಯನ್ನು ನಡೆಸುತ್ತಲೇ ಹೆಚ್ಚಿನ ಕ್ಷೌರಿಕ ಕೌಶಲ್ಯಗಳನ್ನು ಗಳಿಸಬಹುದು.
09. ಸುರಕ್ಷಿತ ಉದ್ಯೋಗ :- Secured Job :-. ಕ್ಷೌರಿಕ ಹಾಗೂ ಕೇಶವಿನ್ಯಾಸರ ಬೇಡಿಕೆಯು ಹವಾಮಾನ ಮತ್ತು ಆರ್ಥಿಕ ಏರಿಳಿತಗಳಿಂದ ಹೆಚ್ಚು ಪ್ರಭಾವಿತವಾಗುವುದಿಲ್ಲ. ಗ್ರಾಹಕರು ಇತರ ಅಂಶಗಳನ್ನು ಲೆಕ್ಕಿಸದೆ ಕ್ಷೌರಿಕರ ಸೇವೆಯನ್ನು ಪಡೆಯಬೇಕಾಗುತ್ತದೆ. ಜನರು ಸುಂದರವಾದ ಕಾಣಲು ಹೆಚ್ಚು ಹಣ ಮತ್ತು ಸಮಯವನ್ನು ನೀಡಲು ಸಿದ್ಧರಿರುತ್ತಾರೆ. ಈ ಅಂಶವು ನುರಿತ ಕ್ಷೌರಿರಿಗೆ ಸುರಕ್ಷಿತ ಹಾಗೂ ನಿಯಮಿತ ಆದಾಯವನ್ನು ಒದಗಿಸುತ್ತದೆ. ಆದ್ದರಿಂದ ಇತರೇ ವೃತ್ತಿಗಳಿಗೆ ಹೊಲಿಸಿದರೆ ಈ ವೃತ್ತಿಯು ಹೆಚ್ಚು ಸುರಕ್ಷಿತ ವೃತ್ತಿಯಾಗಿದೆ.
10. ಉದ್ಯೋಗ ತೃಪ್ತಿ:- Job Satisfaction:- ನಿಯಮಿತ ಆದಾಯದ ಜೊತೆಗೆ ಒಬ್ಬ ವ್ಯಕ್ತಿಯು ಕ್ಷೌರಿಕನಾಗಲು ಪ್ರಮುಖ ಕಾರಣವೆಂದರೆ ಅವನು ತನ್ನ ಗ್ರಾಹಕರನ್ನು ಅತ್ಯುತ್ತಮವಾಗಿ ಕಾಣುವಂತೆ ಮಾಡಲು ಮತ್ತು ಸೌಂದರ್ಯವನ್ನು ಅನುಭವಿಸಲು ಸಹಾಯ ಮಾಡುತ್ತಾನೆ. ಕ್ಷೌರಿಕರು ತನ್ನ ಕೈಚಳಕದಿಂದ ಯಾರನ್ನಾದರೂ ಉತ್ತಮವಾಗಿ ಕಾಣುವಂತೆ ಮಾಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚು ಮಾಡಬಹುದು. ತೃಪ್ತಿಹೊಂದಿದ ಗ್ರಾಹಕನ ಮೆಚ್ಚುಗೆಯು ಕ್ಷೌರಿಕನಿಗೆ ಹೆಚ್ಚಿನ ಉದ್ಯೋಗ ತೃಪ್ತಿ ಮತ್ತು ಆದಾಯವನ್ನು ನೀಡುತ್ತದೆ.
ಕ್ಷೌರಿಕ ವೃತ್ತಿಯ ಅನಾನುಕೂಲಗಳು. DEMERITS OF BARBERING.
ಕ್ಷೌರಿಕರ ವೃತ್ತಿಯ ಪ್ರಮುಖ ಅನಾನುಕೂಲಗಳು ಈ ಕೆಳಗಿನಂತಿವೆ.
01. ಬಂಡವಾಳದ ಕೊರತೆ :-Lack of Capital :-ದಿನದಿಂದ ದಿನಕ್ಕೆ ಕೇಶ ವಿನ್ಯಾಸ ಮತ್ತು ಕ್ಷೌರಿಕರ ವೃತ್ತಿಯು ಹೆಚ್ಚು ಬಂಡವಾಳವನ್ನು ನಿರೀಕ್ಷಿಸುತ್ತಿದೆ. ಆಧುನಿಕ ಕ್ಷೌರಕುಟೀರವನ್ನು ಪ್ರಾರಂಭಿಸಲು ಇಂದು ಸಾಕಷ್ಟು ಬಂಡವಾಳವನ್ನು ಹೂಡಿಕೆ ಮಾಡಬೇಕಾಗಿದೆ. ವ್ಯಾವಹಾರಿಕ ಸ್ಥಳ, ನಿರ್ಮಾಣದ ವೆಚ್ಚ, ಹವಾನಿಯಂತ್ರಣದ ವ್ಯವಸ್ಥೆ, ಕನ್ನಡಿಗಳು, ಪೀಠೋಪಕರಣಗಳು, ವಿದ್ಯುದೀಕರಣ,ಇತರೆ ಜೋಡಣೆಗೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಒಂದು ಕ್ಷೌರ ಕುಟೀರವನ್ನು ಪ್ರಾರಂಭಿಸಲು ಬಡ ಹಾಗೂ ಮಧ್ಯಮವರ್ಗದ ಕ್ಷೌರಿಕರಿಗೆ ಕಷ್ಟವಾಗುತ್ತಿದೆ.
02. ನುರಿತ ಸಿಬ್ಬಂದಿಯ ನಿರ್ವಹಣೆ :-Scarcity of Skilled Staff :- ಇಂದು ಕ್ಷೌರಕುಟೀರ ಮಾಲೀಕರಿಗೆ ಸಿಬ್ಬಂದಿಯ ನೇಮಕ ಮತ್ತು ತರಬೇತಿಯು ದೊಡ್ಡ ಸಮಸ್ಯೆಯಾಗಿದೆ. ಸಿಬ್ಬಂದಿಗಳ ನೇಮಕಾತಿ, ತರಬೇತಿ, ಸಿಬ್ಬಂದಿಯನ್ನು ಉಳಿಸಿಕೊಂಡು ಹೋಗುವ, ಅವರಿಗೆ ಪ್ರೇರೇಪಿಸುವ ಕಾರ್ಯಗಳು ಹೆಚ್ಚು ಜಟಿಲವಾಗುತ್ತಿವೆ. ಕಾರ್ಮಿಕ ನಿರ್ವಹಣೆಯು ಕ್ಷೌರಕುಟೀರದ ಮಾಲೀಕರಿಗೆ ಸಮಸ್ಯೆಯಾಗಿದೆ. ಪ್ರಾಮಾಣಿಕ ಮತ್ತು ನುರಿತ ಕಾರ್ಮಿಕರ ನಿರಂತರ ಲಭ್ಯತೆಯ ಕೊರತೆಯಿಂದ ಅವರಿಗೆ ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ.
03. ಗ್ರಾಹಕರ ನಿಷ್ಠೆಯ ಸಮಸ್ಯೆ :- Problem of Customer Loyalty:- ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ರಾಹಕರ ನಿಷ್ಟೆಯನ್ನು ಹೊಂದುವುದು ಹಾಗೂ ಉಳಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಸಾಮಾನ್ಯವಾಗಿ ಗ್ರಾಹಕರು ತಮ್ಮ ಸೇವೆಗೆ ಒಂದೇ ಸಲೂನನ್ನು ಅವಲಂಬಿಸುವುದಿಲ್ಲ. ಕೆಲವು ಗ್ರಾಹಕರು ಕ್ಷೌರಿಕರಿಗೆ ನಿಷ್ಠಾವಂತರಾಗಿರದೆ ತಮ್ಮ ಅನುಕೂಲಕ್ಕಾಗಿ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ಸೇವೆ ಪಡೆದುಕೊಳ್ಳುತ್ತಾರೆ. ಸಲೂನಿನಲ್ಲಿ ಗ್ರಾಹಕರ ವಾರಾಂತ್ಯದ ಜನದಟ್ಟಣೆಯನ್ನು ನಿರ್ವಹಿಸುವಲ್ಲಿ ಕ್ಷೌರೋದ್ಯಮಿಗೆ ತೊಂದರೆ ಇದೆ. ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚು ಗ್ರಾಹಕರನ್ನು ಗಳಿಸಲು ಕ್ಷೌರಕುಟೀರ ಮಾಲೀಕರು ಕೆಲವು ಮಾರಾಟ ಮತ್ತು ಪ್ರಚಾರ ತಂತ್ರಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಕೆಲಸಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.ಇದು ಕ್ಷೌರಿಕ ಅಂಗಡಿಯ ಮಾಲೀಕರಿಗೆ ಒಂದು ಸಮಸ್ಯೆಯಾಗಿದೆ.
04. ಅನಾರೊಗ್ಯಕರ ಪೈಪೋಟಿ :- Unhealthy Competition:- ಇತರೆ ಯಾವುದೇ ಕ್ಷೇತ್ರದಂತೆಯೇ ಕ್ಷೌರಿಕ ವೃತ್ತಿಯಲ್ಲಿಯೂ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿದೆ. ಹೊಸ ಹೊಸ ಕ್ಷೌರಕುಟೀರಗಳು ಹೊಸ ಆಕರ್ಷಣೆಯೊಂದಿಗೆ ತೆರೆಯುತ್ತಿವೆ. ಒಂದು ಕಾಲದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದ ಈ ವೃತ್ತಿ ಇಂದು ಎಲ್ಲಾ ಜನರನ್ನು ಆಕರ್ಷಿಸಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚು ಅತ್ಯಾಧುನಿಕತೆ ಮತ್ತು ಭಾರೀ ಹೂಡಿಕೆಯೊಂದಿಗೆ ದೊಡ್ಡ ಕ್ಷೌರ ಕುಟೀರಗಳನ್ನು ಪ್ರಾರಂಭಿಸುತ್ತಿವೆ. ಇದರ ಜೊತೆಗೆ ಬೇರೆ ಬೇರೆ ರಾಜ್ಯದ ಜನರು ಬಂದು ಅಂಗಡಿಗಳನ್ನು ಪ್ರಾರಂಭಿಸುತಿದ್ದಾರೆ. ಇವರ ಪೈಪೋಟಿಯನ್ನು ಎದುರಿಸುವುದು ಸಾಪ್ರದಾಯಿಕ ಕ್ಷೌರಕುಟೀರದ ಮಾಲೀಕರಿಗೆ ಕಷ್ಟವಾಗುತ್ತಿದೆ.
05. ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಮಸ್ಯೆ:-Problem in Updating:- ಶೈಲಿ ಮತ್ತು ತಂತ್ರಜ್ಞಾನದಲ್ಲಿನ ನಿರಂತರ ಬದಲಾವಣೆಗಳು ಕ್ಷೌರಿಕರಿಗೆ ಸಮಸ್ಯೆಯಾಗಿವೆ. ನಾವೀನ್ಯತೆ ಮತ್ತು ಮಾರುಕಟ್ಟೆಗೆ ಬರುವ ಹೊಸ ಸಾಧನಗಳ ಪರಿಣಾಮವಾಗಿ ಕ್ಷೌರಿಕರು ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ತಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದು ಮತ್ತು ತಮ್ಮನ್ನು ಸೇವಾಕ್ಷೇತ್ರದಲ್ಲಿ ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
06. ಆರೋಗ್ಯ ಸಮಸ್ಯೆಗಳು:- Health Problems :- ಕ್ಷೌರಿಕರು ತಮ್ಮ ಗ್ರಾಹಕರಿಗೆ ತಮ್ಮ ದೇಹಕ್ಕೆ ಹತ್ತಿರವಾಗಿ ಸೇವೆ ಸಲ್ಲಿಸಬೇಕಾಗುತ್ತದೆ. ಕೆಲವು ಸಾಂಕ್ರಾಮಿಕ ರೋಗಗಳು ಗ್ರಾಹಕರಿಂದ ಕ್ಷೌರಿಕರಿಗೆ ಹರಡುವ ಸಾದ್ಯತೆ ಇರುತ್ತದೆ. ಕೆಲವು ಕ್ಷೌರಿಕರು ತಮ್ಮ ದೇಹದ ಅವಶ್ಯಕತೆಗಳಾದ ಆಹಾರ, ನೀರು, ವಿಶ್ರಾಂತಿ, ಮಲಮೂತ್ರ ವಿಸರ್ಜನೆ ಇತ್ಯಾದಿಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾರೆ. ಆದ್ದರಿಂದ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕ್ಷೌರಿಕರಿಗೆ ಮತ್ತೊಂದು ಸಮಸ್ಯೆಯಾಗಿದೆ.
07. ತೆರಿಗೆಗಳು ಮತ್ತು ಕಾನೂನುಗಳು:-Taxes and Rules:- ಕೇಶವಿನ್ಯಾಸಕರ ಸೇವೆಯ ಮೇಲೆ ಪರಿಣಾಮ ಬೀರುವ ಕಾನೂನಿನಿಂದ ಸ್ಥಳೀಯ ಸಂಸ್ಥೆಗಳಿಂದ ಹೇರಲಾದ ಹಲವು ನಿಯಮಗಳು ಮತ್ತು ನಿಬಂಧನೆಗಳು ಇರುತ್ತವೆ. ಸೇವಾ ಪರವಾನಗಿಗಳು, ಕಾರ್ಮಿಕ ನಿಯಮಗಳು, ಗ್ರಾಹಕರ ಆರೋಗ್ಯ ರಕ್ಷಣೆ, ಬೆಲೆಯ ನಿರ್ಣಯ, ನೈರ್ಮಲ್ಯ ಮತ್ತು ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸಿದ ಕೆಲವು ನಿಯಮಗಳನ್ನು ಅವರು ಅನುಸರಿಸಬೇಕಾಗುತ್ತದೆ. ಜೊತೆಗೆ ಸಮುದಾಯ ಅಥವಾ ವೃತ್ತಿಪರ ಮಂಡಳಿಗಳು ನಿರ್ಧರಿಸುವ ಕೆಲವು ನಿಯಾಮಗಳನ್ನು ತಪ್ಪದೆ ಅನುಸರಿಸಬೇಕಾಗುತ್ತದೆ. ಇವು ಕ್ಷೌರೋದ್ಯಮಿಯ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.
08. ಉತ್ತಮ ವೃತ್ತಿಪರ ಸಂಘಟನೆಯ ಕೊರತೆ:-Lack of Good Professional Organization:- ಭಾರತದಂತಹ ದೇಶಗಳಲ್ಲಿ ಕ್ಷೌರಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ಮತ್ತು ಅವರಿಗೆ ಕೆಲವು ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಯಾವುದೇ ಬಲವಾದ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಸಂಸ್ಥೆಗಳು ಇಲ್ಲವೆಂದೇ ಹೇಳಬೇಕು. ಇದರಿಂದ ಕ್ಷೌರಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಪಡೆಯಲು ಸಾದ್ಯವಾಗುತ್ತಿಲ್ಲ.
ಲೇಖನ- ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ. ಫೋನ್ 99011 96772


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ