003 .. ಕ್ಷೌರಿಕ ವೃತ್ತಿಯ ಇತಿಹಾಸ.
ಕ್ಷೌರಿಕ ವೃತ್ತಿಯ ಇತಿಹಾಸ. HISTORY OF BARBERING.
ಕ್ಷೌರಿಕ ವೃತ್ತಿಯು ಒಂದು ಪುರಾತನ ವೃತ್ತಿ. ಕ್ಷೌರಿಕರ ಇತಿಹಾಸವು ಬಹಳ ಪುರಾತನ ಹಾಗೂ ಸ್ವಾರಸ್ಯಕರವಾಗಿದೆ. ಆದಿ ಮಾನವನು ತನ್ನ ದೇಹದ ಅನಗತ್ಯ ಕೂದಲುಗಳ ತೊಂದರೆಯಿಂದ ಮುಕ್ತಿ ಪಡೆಯಲು ತಾನು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡಿರಬಹುದು ಅಥವಾ ತನ್ನ ಸಂಗಾತಿಯ ಸಹಾಯ ಪಡೆದಿರಬಹುದು ಎಂದು ಊಹಿಸಲಾಗುತ್ತದೆ. ಆದ್ದರಿಂದ ಕೂದಲು ಕತ್ತರಿಸುವ ಕ್ರಿಯೆ ಮಾನವನ ಅಸ್ತಿತ್ವದಷ್ಟೇ ಹಿಂದಿನದು.
ಈಗ ಲಭ್ಯವಿರುವ ಆಧಾರಗಳ ಪ್ರಕಾರ ಆದಿಮಾನವರು ಕೂದಲು ಕತ್ತರಿಸಲು ವಿಶೇಷ ಬಗೆಯ ಚಿಪ್ಪು ಹಾಗೂ ಹರಿತವಾದ ಕಲ್ಲು ಬಳಸುತ್ತಿದ್ದರೆಂದು ತಿಳಿಯತ್ತದೆ. ಆದರೆ ಕ್ಷೌರಿಕರ ಇತಿಹಾಸವು ಸುಮಾರು 7000 ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಗುತ್ತದೆ. ಈಜಿಪ್ಟ್ನಲ್ಲಿ ಕ್ರಿಸ್ತಪೂರ್ವ 5000 ವರ್ಷಗಳ ಹಿಂದೆ ಪ್ರಾರಂಭವಾದ ಬಗ್ಗೆ ಪುರಾವೆಗಳಿವೆ. ಪ್ರಾಚಿನ ಇಜಿಪ್ಟ್ ನಲ್ಲಿ ಮೃತವ್ಯಕ್ತಿಯ ಆತ್ಮವು ಮನುಷ್ಯನ ಕೂದಲಿನಿಂದ ಪ್ರವೇಶಿಸುತ್ತದೆ ಎಂದು ನಂಬಿದ್ದರು. ಆ ರೀತಿ ದೇಹದಲ್ಲಿ ಪ್ರವೇಶಿಸಿದ ಆತ್ಮಗಳು ಕೂದಲನ್ನು ಹರಡಿಕೊಂಡು ನೃತ್ಯವನ್ನು ಮಾಡಿ ಕತ್ತರಿಸಿಕೊಂಡರೆ ದೇಹದಿಂದ ಹೊರಗೆ ಹೋಗುತ್ತವೆ ಎಂದು, ಕೂದಲನ್ನು ಕತ್ತರಿಸುವ ಕಾರ್ಯವನ್ನು ಬೇರೆಯವರಿಗೆ ವಹಿಸಿದರೆ ಅವರ ಮಾಟ ಮಂತ್ರಗಳಿಂದ ತೊಂದರೆಯಾಗುತ್ತದೆ ಎಂದು ಭಾವಿಸಿ ಈ ಕಾರ್ಯವನ್ನು ಪೂಜಾರಿಗಳು ಅಥವಾ ವೈದ್ಯರಿಗೆ ವಹಿಸುತ್ತಿದ್ದರು. ಇವರು ಕ್ಷೌರದ ಜೊತೆಗೆ ಚಿಕಿತ್ಸೆ, ಪೂಜೆ ಹಾಗೂ ದಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದರು. ಅಲ್ಲಿ ಕ್ಷೌರಿಕ ವೃತ್ತಿಯು ಅತ್ಯಂತ ಶ್ರೇಷ್ಠವೃತ್ತಿ ಎಂದು ಪರಿಗಣಿಸಲಾಗಿತ್ತು. ಇದೆ ರೀತಿಯಲ್ಲಿ ಬೇಬಿಲೋನಿಯಾದಲ್ಲಿ ಪುರುಷರು ಉದ್ದನೆಯ ಗಡ್ಡವನ್ನು ಸ್ತ್ರೀಯರು ಉದ್ದನೆಯ ತಲೆಯ ಕೂದಲನ್ನು ಬಿಡುತ್ತಿದ್ದರು. ಇವರಿಗೆ ಕ್ಷೌರ ಮಾಡುವ ಕೇಶವಿನ್ಯಾಸ ಮಾಡುವ, ಕೂದಲನ್ನು ಸುರಳಿ ಮಾಡುವ, ಕೂದಲಿಗೆ ತೈಲ ಹಾಗೂ ಸುಗಂಧ ದ್ರವ್ಯಗಳನ್ನು ಬಳಸುವ, ವಿಗ್ ಗಳನ್ನು ತಯಾರಿಸಿ ಬಳಸುವ ಕಲೆಯು ತಿಳಿದಿತ್ತೆಂದು ತಿಳಿದು ಬರುತ್ತದೆ. ಇದೆ ರೀತಿಯಲ್ಲಿ ಸಿಂಧೂ ನದಿಯ ನಾಗರಿಕತೆ, ಗ್ರೀಕ್ ನಾಗರಿಕತೆ ಹಾಗೂ ಇತರೆ ಎಲ್ಲಾ ಪ್ರಾಚೀನ ನಾಗರಿಕತೆಗಳಲ್ಲಿ ಕ್ಷೌರಿಕ ಸೇವೆ ಅಸ್ತಿತ್ವದಲ್ಲಿ ಇರುವುದು ಕಂಡು ಬರುತ್ತದೆ.ಕ್ರಿಸ್ತ ಪೂರ್ವ 3500 ನೇ ಇಸವಿಯಲ್ಲಿ (ಕಂಚಿನ ಯುಗ) ಈಜಿಪ್ಟ್ ನಾಗರಿಕತೆಯಲ್ಲಿ ಕ್ಷೌರಿಕರು ರೇಜರ್ (ಕತ್ತಿ) ಬಳಕೆ ಮಾಡುತಿದ್ದರೆಂದು ಕತ್ತರಿ ಹಾಗೂ ಬಾಚಣಿಕೆಗಳು ಬಳಕೆಯಲ್ಲಿ ಇರುವುದು ಕಂಡು ಬಂದಿದೆ. ಸನಾತನ ಧರ್ಮ ನಂತರದ ಜೈನ ಹಾಗೂ ಬೌದ್ಧ ಧರ್ಮದಲ್ಲಿ ದೇಹದ ಕೂದಲನ್ನು ತೆಗೆಯುವ ಪದ್ದತಿಗಳು ಸಂಸ್ಕಾರಗಳು ಆರಂಭದಿಂದ ಇಂದಿಗೂ ರೂಢಿಯಲ್ಲಿರುವುದು ಕಾಣಬಹುದು. ಕ್ರಿಸ್ತಪೂರ್ವ 500ನೆ ಇಸವಿಯಲ್ಲಿ ಗ್ರೀಕರಿಗೆ ಗಡ್ಡವನ್ನು ಟ್ರಿಮ್ ಮಾಡಿಸುವದು ಒಂದು ಫ್ಯಾಷನ್ ಹಾಗಿತ್ತು. ಕೆಲವು ದೊರೆಗಳು ತಮ್ಮ ಸೈನಿಕರು ಕೈಗೆ ದೊರೆತಾಗ ಶತೃಗಳಿಗೆ ಹಿಂಸಿಸಲು ಅವಕಾಶವಿರದ ಹಾಗೆ ಕೂದಲನ್ನು ತೆಗೆಸಲು ಅದೇಶಿಸಿದ್ದರೆಂದು ತಿಳಿಯುತ್ತದೆ. ಪುರಾತನ ರೋಮ್ ಹಾಗೂ ಗ್ರೀಕ್ ನಲ್ಲಿ ಗುಲಾಮರನ್ನು ಹಾಗೂ ಸೇವಕರನ್ನು ಕೂದಲನ್ನು ಕತ್ತರಿಸಲು, ಕೂದಲಿಗೆ ಬಣ್ಣ ಹಾಕಲು, ಮುಖ ಕ್ಷೌರ ಮಾಡಲು ಬಳಸುತಿದ್ದರು. ಗ್ರೀಕ್ ನಾಗರೀಕತೆಯಲ್ಲಿ (ಸುಮಾರು ಕ್ರಿಸ್ತಪೂರ್ವ 296 ನೆ ಇಸವಿ) ಸಿಸಿಲಿಯ ಕಾಲೊನಿಗಳಲ್ಲಿ ಕ್ಷೌರಿಕರ ಅಂಗಡಿಗಳು ಇದ್ದವೆಂದು ಕ್ಷೌರಿಕರು ತನ್ನ ಕೇಶವಿನ್ಯಾಸದ ಜೊತೆಗೆ ಶಸ್ತ್ರಚಿಕಿತ್ಸೆ ಹಾಗೂ ದಂತಚಿಕಿತ್ಸೆಯನ್ನು ಮಾಡುತಿದ್ದರೆಂದು ಕ್ಷೌರಿಕರ ಅಂಗಡಿಗಳು ರಾಜಕೀಯ, ಸಾಮಾಜಿಕ ಮಾಹಿತಿ ಕೇಂದ್ರವಾಗಿದ್ದವಲ್ಲದೆ ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುವ ತಾಣಗಳಾಗಿದ್ದವೆಂದು ತಿಳಿದು ಬರುತ್ತದೆ.ಪುರಾತನ ಬೈಬಲ್ ನಲ್ಲಿ ಬಾರ್ಬರ್ ಹಾಗೂ ರೇಜರ್ ಎಂಬ ಪದಗಳನ್ನು ಹಲವಾರು ಬಾರಿ ಬಳಸಲಾಗಿದೆ.ಕೂದಲ ಸಂರಕ್ಷಣೆಯ ಸೇವೆಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿ ಕ್ರಿಸ್ತಶಕ 1092 ರಲ್ಲಿ ಯೂರೋಪಿನ ರೋಮನ್ ಕ್ಯಾಥೋಲಿಕ್ ಚರ್ಚ್ ನ ಅರ್ಚಕರು ಕಡ್ಡಾಯವಾಗಿ ಮುಖಚೌರ ಮಾಡಿಸಬೇಕೆಂದು ಅಲ್ಲಿನ ಪೊಪರು ಅದೇಶಿಸಿದ್ದರು.ಯುರೋಪ್ ನಲ್ಲಿ ಕ್ರಿಸ್ತಶಕ 1300 ರ ಸುಮಾರು ಕ್ಷೌರಿಕರು ಕ್ಷೌರದ ಜೊತೆಗೆ ಶಸ್ತ್ರ ಚಿಕಿತ್ಸೆ, ಹಲ್ಲು ಕೀಳುವ, ಗಾಯಗಳಲ್ಲಿನ ಕಿವನ್ನು ತೆಗೆಯುವ, ಔಷದ ನೀಡಿ ಉಪಚರಿಸುವ ಸೇವೆ ನೀಡುತಿದ್ದರು. ನಂತರ ಕ್ಷೌರಿಕರು ತಮ್ಮ ಈ ಸೇವೆಯ ಪ್ರಚಾರಕ್ಕಾಗಿ ಗಾಯಕ್ಕೆ ಸುತ್ತಿದ ಬಟ್ಟೆಯನ್ನು ಬಿಳಿಯ ಕಂಬದ ಮೇಲೆ ಹಾಕುತ್ತಿದ್ದಾಗ ಗಾಳಿಗೆ ಕೆಂಪು ರಕ್ತದ ಕಲೆ ಹೊಂದಿದ ಬಟ್ಟೆ ಕಂಬಕ್ಕೆ ಸುತ್ತಿಕೊಂಡು ಕೆಂಪು ಬಿಳಿ ಬಣ್ಣದ ಸುರುಳಿಯಾಗುತ್ತಿತ್ತು. ಇದರಿಂದ ಕ್ಷೌರಿಕ ಕಂಬ(Barber Pole) ಏರ್ಪಟ್ಟು ಕ್ಷೌರಿಕ ಕಂಬವು ಕ್ಷೌರಿಕ ಅಂಗಡಿಯ ಗುರುತಾಯಿತು.
ಪ್ರಾಚೀನ ಚೀನಾದಲ್ಲಿ ಇದ್ದ ಪ್ರಸಿದ್ಧ ತತ್ವಜ್ಞಾನಿ ಕನ್ಫ್ಯೂಸಿಯಸ್ ರ ಸಿದ್ದಾಂತದ ಪ್ರಕಾರ ಮನುಷ್ಯನಿಗೆ ದೇಹ, ಆತ್ಮ, ಕೂದಲುಗಳು ಅವರ ಪೂರ್ವಜರಿಂದ ಬಂದ ಬಳುವಳಿ ಎಂದು ಅವನ್ನು ಕತ್ತರಿಸುವದು ಪಾಪದ ಕೆಲಸ ಎಂಬ ಭಾವನೆ ಹೊಂದಿದ್ದರು. ಅದ್ದರಿಂದ ಅವರು ದೇಹದ ಕೂದಲುಗಳನ್ನು ಕತ್ತರಿಸುತ್ತಿರಲಿಲ್ಲ. ಕಿನ್ಗ್ ಮನೆತನದ ಅಳ್ವಿಕೆ ಬಂದ ನಂತರ ಕ್ಷೌರಿಕರ ಕೆಲಸ ಪ್ರಾರಂಭವಾಯಿತೆಂದು. ಜೊತೆಗೆ ಬೌದ್ಧ ಧರ್ಮದ ಪ್ರಭಾವ,ಪ್ರಜಾಪ್ರಭುತ್ವದ ಕಲ್ಪನೆ, ಪಾಶ್ಚಿಮಾತ್ಯರ ಪ್ರಭಾವದಿಂದ ಕ್ಷೌರಿಕ ಅಂಗಡಿಗಳು 14 ನೆ ಶತಮಾನದ ಈಚೆಗೆ ಪ್ರಾರಂಭವಾದವೆಂದು ತಿಳಿದು ಬರುತ್ತದೆ.ಕ್ರಿಸ್ತಶಕ 1540 ರಲ್ಲಿ ಇಂಗ್ಲೆಂಡಿನ ಏಳನೇ ಹೆನ್ರಿಯು ಬೇರೆ ಬೇರೆ ಇದ್ದ ಕ್ಷೌರಿಕರ ಹಾಗೂ ಶಸ್ತ್ರಚಿಕಿತ್ಸೆಕರ ಗುಂಪುಗಳನ್ನು ಒಂದು ಗೂಡಿಸಿದನು. ನಂತರದ ದಿನಗಳಲ್ಲಿ ಇವೆರಡೂ ಗುಂಪುಗಳು ಬೇರೆಯಾಗಲು ಪ್ರಾರಂಭಿಸಿ ಕ್ರಿಸ್ತಶಕ 1745 ರಲ್ಲಿ ಇಂಗ್ಲೆಂಡಿನಲ್ಲಿ ಶಸ್ತ್ರಚಿಕಿತ್ಸೆಕರು ಕ್ಷೌರಿಕರಿಂದ ಬೇರ್ಪಟ್ಟರು ಆದರೆ ರಕ್ತದ ಚಿನ್ನೆಯ ಕೆಂಪು ಬಿಳಿಯ ಕಂಬದ ಗುರುತನ್ನು ಕ್ಷೌರಿಕರೇ ಉಳಿಸಿಕೊಂಡು ಬಂದರು.ಕ್ರಿಸ್ತಶಕ 1777 ರಲ್ಲಿ ಕೇಶವಿನ್ಯಾಸಕರ ಸಂಘವು ಪ್ರಾರಂಭವಾಯಿತು. ಕ್ರಿಸ್ತಶಕ 1893 ರಲ್ಲಿ ಚಿಕಾಗೋದ ಮೊಲರ್ ಎಂಬುವವರು ಪ್ರಪ್ರಥಮ ಬಾರಿಗೆ ಕ್ಷೌರಿಕರ ಶಾಲೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಕೇಶವಿನ್ಯಾಸವು ವೃತ್ತಿಪರತೆಯನ್ನು ಹೊಂದಿತು. ವಿದ್ಯುತ್ ಶಕ್ತಿಯ ಆಗಮನ ಹಾಗೂ ಯಂತ್ರಗಳ ಹಾಗೂ ಇತರೆ ಸಾಧನಗಳ ಬಳಕೆ ಕೇಶವಿನ್ಯಾಸ, ಕೂದಲಿಗೆ ಬಣ್ಣದ ಉಪಯೋಗ, ಮುಂತಾದ ಆವಿಷ್ಕಾರಗಳು ಕ್ಷೌರಿಕರ ಸೇವೆಗಳಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದವು.
ಪ್ರಸ್ತುತ ದಿನಗಳಲ್ಲಿ ಕ್ಷೌರಿಕ ಕಲೆಯನ್ನು ಕಲಿಸಿಕೊಡುವ ಕಾಲೇಜುಗಳು ಪ್ರಾರಂಭವಾಗಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಕ್ಷೌರಿಕ ವಸ್ತುಗಳನ್ನು ಮಾರಲು ಹಾಗೂ ಕ್ಷೌರಿಕ ಸೇವೆಯನ್ನು ನೀಡಲು ಪೈಪೋಟಿ ಮಾಡುತ್ತಿರುವದು ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ವೃತ್ತಿಯಲ್ಲಿ ಪೈಪೋಟಿಯು ಹೆಚ್ಚುತ್ತಿದ್ದು ಭಾರತದ ಸಂಪ್ರಾದಾಯಕ ಕ್ಷೌರಿಕರು ಈ ವೃತ್ತಿಯನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ.
ಲೇಖನ- ವೆಂಕಟಾಚಲಪತಿ.ಪಿ.ಬಿ. ದಾವಣಗೆರೆ. Pho.99011 96772.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ